ಕನ್ನಡಪ್ರಭ ವಾರ್ತೆ ಅರಕಲಗೂಡು
ಯುವ ಎಂಜಿನಿಯರ್ ಒಬ್ಬರು ತಮ್ಮ ವಿವಾಹದ ನೆನಪಿಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 5 ಲಕ್ಷ ರು.ವೆಚ್ಚದ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ತಾಲೂಕಿನ ಹೊನ್ನವಳ್ಳಿ ಬಿದುರುಮೆಳೆ ಕೊಪ್ಪಲು ಗ್ರಾಮದ ದೇವರಾಜೇಗೌಡ-ರತ್ನಮ್ಮ ದಂಪತಿಯ ಪುತ್ರ ಶಿವಕುಮಾರ್ ಎಂಜಿನಿಯರ್ ಪದವೀಧರರಾಗಿದ್ದು, ಮಂಡ್ಯ ಜಿಲ್ಲೆ ಕೆರೆಗೋಡು ಹಲಗೆರೆ ಗ್ರಾಮದ ಸಂಗೀತಾ ಅವರೊಂದಿಗೆ ನ.11ರಂದು ಸರಳ ವಿವಾಹವಾದರು. ತಮ್ಮ ವಿವಾಹದ ನೆನಪಿಗಾಗಿ ಕಸಬಾ ಹೋಬಳಿಯ 26 ಸರ್ಕಾರಿ ಶಾಲೆಗಳಿಗೆ 5 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರೈತ ಸಂಘದ ಹಿರಿಯ ಹೋರಾಟಗಾರರಾಗಿದ್ದ ದಿ. ಹೊ.ತಿ.ಹುಚ್ಚಪ್ಪ ಅವರ ಮೊಮ್ಮಗನಾದ ಶಿವಕುಮಾರ್ ತಮ್ಮ ತಾತ ದತ್ತು ಪಡೆದಿರುವ ಹೊನ್ನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.9ರ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೀರಿನ ಯಂತ್ರವನ್ನು ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಮ್ಮ ವಿವಾಹದ ನೆನಪಿಗಾಗಿ 26 ಶಾಲೆಗಳಿಗೆ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡುತ್ತಿರುವ ಶಿವಕುಮಾರ್ ಅವರ ಕಾರ್ಯ ಅತ್ಯಂತ ಪುಣ್ಯದ ಕಾರ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶಿಕ್ಷಣೆ ನೆರವಾಗಲು ಕೈಜೋಡಿಸುತ್ತಿರುವ ಇವರ ಸೇವೆ ಬದುಕಿನುದ್ದಕ್ಕೂ ಎಲ್ಲರಿಗೂ ದೊರಕುವಂತಾಗಲಿ. ಇವರ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಹೊ.ತಿ. ಹುಚ್ಚಪ್ಪ ಅವರ ಪುತ್ರ ಖಂಡೇಶ್ವರ ಕುಮಾರ್ ಮಾತನಾಡಿ, ತಮ್ಮ ತಂದೆ ರೈತಸಂಘದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದು, ತಮ್ಮ ಪುತ್ರರಿಗೆ ಸರಳ ವಿವಾಹ ನಡೆಸಿ ಆದರ್ಶ ಮೆರೆದಿದ್ದರು. ಇವರ ಮೊಮ್ಮಗ ಶಿವಕುಮಾರ್ ಇದೇ ಹಾದಿಯಲ್ಲಿ ನಡೆದು ಸರಳವಿವಾಹ ವಾಗುತ್ತಿದ್ದಾರೆ. ಮದುವೆಗಾಗಿ ದುಂದುವೆಚ್ಚ ಮಾಡದೆ ಅದೇ ಹಣದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.
ಶಿಕ್ಷಣ ಸಂಯೋಜಕ ಶಿವಪ್ರಕಾಶ್, ಸಿಆರ್‌ಪಿ ಬಾಲು, ನಯಾಜ್, ಮುಖ್ಯ ಶಿಕ್ಷಕಿ ಲಿಂಗಮ್ಮ, ತಾಪಂ ಮಾಜಿ ಸದಸ್ಯೆ ಸರೋಜಮ್ಮ, ರತ್ನಮ್ಮ, ದೇವರಾಜೇಗೌಡ, ತಾ ಪಂ ಕೆಡಿಪಿ ಮಾಜಿ ಸದಸ್ಯ ಎಚ್.ಎಚ್. ಜನಾರ್ಧನ್, ಪುಷ್ಪ, ಶಿವಕುಮಾರ್, ಶಿಕ್ಷಕರಾದ ಲತಾಮಣಿ, ಲೀಲಾ, ನಾಗವೇಣಿ, ಲೋಕೇಶ್ ಇದ್ದರು.