ಪ್ರವೀಣ್ ಘೋರ್ಪಡೆ
ಈಗಾಗಲೇ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಸೂರ್ಯಕಾಂತಿ ಅಲ್ಲದೇ ಕಬ್ಬು ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುವ ನಿರಿಕ್ಷೆಯಲ್ಲಿದ್ದ ರೈತರಿಗೆ ಡೋಣಿ ನದಿಯೂ ರೈತರಿಗೆ ಕಣ್ಣೀರು ತರಿಸಿದೆ. ಡೋಣಿ ನದಿ ತೀರಕ್ಕೆ ಹೊಂದಿಕೊಂಡಿರುವ ಗುತ್ತಿಹಾಳ , ಬೋಳವಾಡ, ಬೊಮ್ಮನಹಳ್ಳಿ, ತಾಳಿಕೋಟೆ, ಹರನಾಳ ಗ್ರಾಮಗಳ ರೈತರು ನೂರಾರು ಎಕರೆಯಲ್ಲಿ ಶೇ.೯೦ ರಷ್ಟು ಬಿತ್ತನೆ ಮಾಡಿಕೊಂಡಿದ್ದರು. ಡೋಣಿ ನದಿಯ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಹಾಳಾಗಿದೆ.
ಕೆಳಮಟ್ಟದ ಸೇತುವೆಗಳು ಜಲಾವೃತ:ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಡೋಣಿ ನದಿ ಕಳೆದ 4 ದಿನಗಳಿಂದಲೂ ಉಕ್ಕಿ ಹರಿಯುತ್ತಿದ್ದು, ವಿಜಯಪೂರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಮೂಕಿಹಾಳ ಹಳ್ಳದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ತಾಳಿಕೋಟೆಯಿಂದ ಬೇರೆ ಬೇರೆ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯ ಮೂಲಕ ವಿಜಯಪುರಕ್ಕೆ ತೆರಳುವ ಡೋಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮೇಲ್ಮಟ್ಟದ ಸೇತುವೆ ೪ ವರ್ಷಗಳ ಹಿಂದೆಯೇ ಕುಸಿತ ಕಂಡಿದ್ದರಿಂದ ನೂತನ ಸೇತುವೆ ನಿರ್ಮಾಣಕ್ಕೆ ₹ ೩೦ ಕೋಟಿ ಟೆಂಡರ್ ಪ್ರಕ್ರಿಯೆ ಆಗಿದ್ದು, ಸೇತುವೆಯನ್ನು ನೆಲಸಮಗೊಳಿಸಲಾಗಿದೆ. ಹೀಗಾಗಿ, ಸಂಚಾರ ಮಾರ್ಗವನ್ನು ಪಕ್ಕದ ಕೆಳಮಟ್ಟದ ಸೇತುವೆಯ ಮೇಲೆ ನೀಡಲಾಗಿದೆ. ಆದರೆ, ಡೋಣಿ ನದಿಯೂ ತುಂಬಿ ಹರಿಯುತ್ತಿರುವುದರಿಂದ ಕೆಳಮಟ್ಟದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ, ಸಂಚಾರವೂ ಬಂದ್ ಆಗಿದೆ. ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಡಗಿನಾಳ ಮುಖಾಂತರ ತೆರಳುವ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಸಂಜೆಯ ವೇಳೆ ಮಳೆಯಾಗಿದ್ದರಿಂದ ಮೂಕಿಹಾಳ ಹಳ್ಳವೂ ತುಂಬಿ ಹರಿಯುತ್ತಿರುವುದರಿಂದ ಆ ರಸ್ತೆ ಸಂಚಾರವನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ.
ಪ್ರವಾಹ ಸೃಷ್ಟಿಯಾಗಿ ಸೇತುವೆಗಳು ಮುಳಗಡೆಯಾಗಿ ರೈತರು, ಜನ ಸಾಮಾನ್ಯರು ಪರದಾಡುತ್ತಿದ್ದರೂ ತಾಲೂಕಾಡಳಿತದ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿಲ್ಲ. ಪ್ರವಾಹ ಉಂಟಾಗಿ ಮುಖ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡರೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿ ತಾಲೂಕಾಡಳಿತದ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ. ಇದು ಪ್ರಯಾಣಿಕರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟ್
ರಾಮು ಜಂಬಗಿ, ಗುತ್ತಿಹಾಳ ರೈತಬಾಕ್ಸ್