ಕಾಮಗಾರಿ ಮುಕ್ತಾಯಕ್ಕೆ ಆಗ್ರಹಿಸಿ ಕತ್ತೆ ಮೆರವಣಿಗೆ

KannadaprabhaNewsNetwork |  
Published : Jul 16, 2025, 12:45 AM IST
ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರವಿಂದ ಕುಲಕರ್ಣಿ ಮಾತನಾಡಿದರು. | Kannada Prabha

ಸಾರಾಂಶ

ಕೊನೆಯ ಹಂತದ ಕಾಮಗಾರಿಗೆ ಕೇವಲ ₹೧೭೦ ಕೋಟಿ ಅವಶ್ಯವಿದೆ. ಈ ಹಣ ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬೂದಿಹಾಳ- ಪೀರಾಪೂರ ಏತ ನೀರಾವರಿಗೆ ಸಂಬಂಧಿಸಿದಂತೆ ಮುಕ್ತಾಯ ಹಂತದ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆಗೊಳಿಸದಿರುವುದನ್ನು ಖಂಡಿಸಿ ಜು.16ರಂದು ಪಟ್ಟಣದಲ್ಲಿ ಕತ್ತೆಗಳ ಮೆರವಣಿಗೆ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೂದಿಹಾಳ- ಪೀರಾಪೂರ ಏತ ನೀರಾವರಿ ಎಫ್‌ಐಸಿ ಒಳಗಾಲುವೆ ಪೂರ್ಣಗೊಳಿಸುವಂತೆ ಕಳೆದ ೪ ದಿನಗಳಿಂದಲೂ ಕೊಡಗಾನೂರ ಕ್ರಾಸ್‌ನಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರದ ಯಾವ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ. ಯೋಜನೆ ಸಂಬಂಧ ಸಚಿವ ಎಂ.ಬಿ.ಪಾಟೀಲರೂ ಒಂದು ಶಬ್ಧ ಎತ್ತುತ್ತಿಲ್ಲ. ಹೀಗಾಗಿ ರೈತರೆಲ್ಲರು ಒಮ್ಮತದ ನಿರ್ಣಯಕೈಗೊಂಡು ಕತ್ತೆ ಚಳವಳಿ ನಡೆಸಲು ತಿರ್ಮಾನ ಕೈಗೊಂಡಿದ್ದೇವೆ. ಅಂದು ಬೆಳಗ್ಗೆ ೧೧ಗಂಟೆಗೆ ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕತ್ತೆಗಳ ಮೆರವಣಿಗೆ ಪ್ರಾರಂಭಗೊಂಡು ಬಸ್ ನಿಲ್ದಾಣದ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಮರಳಿ ಬಸವೇಶ್ವರ ಸರ್ಕಲ್‌ಗೆ ಮುಕ್ತಾಗೊಳ್ಳಲಿದೆ. ನಂತರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು.

ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಪಾಟೀಲ ಮಾತನಾಡಿ, ಬೂದಿಹಾಳ-ಪೀರಾಪೂರ ಏತ ನೀರಾವರಿಗೆ ಈಗಾಗಲೇ ₹೧೫೦೦ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಕಾಮಗಾರಿ ಮುಕ್ತಾಯಗೊಂಡು ೨ ವರ್ಷಗಳೇ ಗತಿಸಿ ಹೋಗಿದೆ. ಆದರೆ ಸದ್ಯ ಕೊನೆಯ ಹಂತದ ಕಾಮಗಾರಿಗೆ ಕೇವಲ ₹೧೭೦ ಕೋಟಿ ಅವಶ್ಯವಿದೆ. ಈ ಹಣ ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ ಅವರು ರೈತರ ಪರಿಸ್ಥಿತಿ ಅರಿತು ಕಾಮಗಾರಿಗೆ ಡಿಪಿಆರ್ ತಯಾರಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದರು.

ರೈತ ಮುಖಂಡ ಪ್ರಭುಗೌಡ ಬಿರಾದಾರ(ಅಸ್ಕಿ) ಮಾತನಾಡಿ, ಕತ್ತೆ ಚಳವಳಿಗೆ ಸರ್ಕಾರ ಬಗ್ಗದೇ ಇದ್ದಲ್ಲಿ ನೂರಾರು ಎತ್ತಿನ ಬಂಡೆಗಳೊಂದಿಗೆ ಬಾರಕೋಲ ಚಳವಳಿ ನಡೆಯಲಿದೆ. ಇದಕ್ಕೂ ಸ್ಪಂದಿಸದಿದ್ದರೆ ಸಿಎಂ, ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡು ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಸತ್ತಿದೆಂದು ತಿಳಿದು ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಎಲ್ಲರ ಭಾವಚಿತ್ರಗಳನ್ನಿಟ್ಟು ಪಿಂಡ ಪ್ರದಾನ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.

ರೈತ ಮುಖಂಡ ಶಿವಪುತ್ರಪ್ಪ ಚೌದ್ರಿ ಮಾತನಾಡಿ, ಇಂಡಿ ಮತಕ್ಷೇತ್ರಕ್ಕೆ ₹೫ ಸಾವಿರ ಕೋಟಿ ಹಣ ನೀಡಿರುವ ಮುಖ್ಯಮಂತ್ರಿಗಳು ರೈತರಿಗಾಗಿ ಕೇವಲ ₹೨೦೦ ಕೋಟಿ ಕೊಡಲು ಮೀನಮೇಷ ಏಣಿಸುತ್ತಿರುವುದು ಸರ್ಕಾರಕ್ಕೆ ರೈತರ ಮೇಲಿ ಪ್ರೀತಿ ಎಷ್ಟಿದೆ ಎಂಬುದು ತೋರಿಸುತ್ತಿದೆ ಎಂದರು.

ಈ ವೇಳೆ ರೈತ ಸಂಘದ ತಾಲೂಕು ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಮುಖಂಡರಾದ ಗುರುರಾಜ ಪಡಶೆಟ್ಟಿ, ಸುರೇಶ ಕುಮಾರ ಇಂಗಳಗೇರಿ, ನಿಂಗು ಚೌದ್ರಿ, ಚಂದ್ರಶೇಖರ ಸಜ್ಜನ, ಅಶೋಕ ಉಪ್ಪಲದಿನ್ನಿ, ಬಸನಗೌಡ ಹಳ್ಳಿಪಾಟೀಲ, ಶಂಕರಗೌಡ ದೇಸಾಯಿ, ಮಹಾದೇವಪ್ಪ ಅಸ್ಕಿ, ಬಸನಗೌಡ ಪಾಟೀಲ, ಮಂಜು ಬಡಿಗೇರ, ಶಿವನಗೌಡ ಜಾಲಿಕಟ್ಟಿ, ರಮೇಶ ಮದ್ದರಕಿ, ಅಶೋಕ ಕಾಮರಡ್ಡಿ, ಚನ್ನಬಸುಗೌಡ ಹೊಸಳ್ಳಿ, ಮೊದಲಾದವರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು