ಕನ್ನಡಪ್ರಭ ವಾರ್ತೆ ವಿಜಯಪುರ
ಬಸವನ ಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಮುಳವಾಡ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 6 ಬಿಜೆಪಿ ಬೆಂಬಲಿತ ಸದಸ್ಯರು ಬಿಜೆಪಿ ತೊರೆದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ನಗರದಲ್ಲಿರುವ ಸಚಿವ ಶಿವಾನಂದ ಪಾಟೀಲ ಅವರ ಗೃಹ ಕಚೇರಿಗೆ ಆಗಮಿಸಿ ಸೇರ್ಪಡೆಯಾದರು.ಮುಳವಾಡ ಗ್ರಾಪಂ ಬಿಜೆಪಿ ಬೆಂಬಲಿತ ಅಧ್ಯಕ್ಷ ಬಾಳು ಚಿನಕೇಕರ, ಉಪಾಧ್ಯಕ್ಷೆ ಮಧುಮತಿ ಧನ್ಯಾಳ, ಸದಸ್ಯರಾದ ಹನುಮಂತ ಕಳಸಗೊಂಡ, ರಮೇಶ ಕೋಳೂರ, ರಮೇಶ ಭಜಂತ್ರಿ ಇವರು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಸಚಿವರು ಕಾಂಗ್ರೆಸ್ ಪಕ್ಷದ ಶಾಲುಹೊದಿಸಿ ಮುಳವಾಡ ಗ್ರಾಪಂ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಬ.ಬಾಗೇವಾಡಿ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಬಾಳು ಚಿನಕೇಕರ, ಇದು ಚುನಾವಣಾ ಸಂದರ್ಭ ಇಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇವೆ. ಬಸವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವ ಶಿವಾನಂದ ಪಾಟೀಲ ಅವರು ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿವೆ. ಇದನ್ನು ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದಾಗಿ ವಿವರಿಸಿದರು.ಬಳಿಕ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅವರು, ರಾಜಕೀಯಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ನಾನು ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಹೊರತಾಗಿ ಯಾವುದೇ ಟೀಕೆಗಳಿಗೆ ಕಿವಿಗೊಡುವುದಿಲ್ಲ ಎಂದರು. ಈ ವೇಳೆ ಗ್ರಾಮದ ಮುಖಂಡರಾದ ಶೇಖಪ್ಪ ಬಿಳಗಿ, ಶಿವಪ್ಪ ಗಾಯಕವಾಡ, ಡಿ.ಸಿ. ಹಿರೇಕುರುಬರ, ರವಿ ಕೆಂಗನಾಳ, ಸದಾಶಿವ ಕುಬಕಡ್ಡಿ, ಸಂಗನಗೌಡ ಪಾಟೀಲ, ಹಮೀದ ಹವಾಲ್ದಾರ್, ಮಲ್ಲು ಅಸಂಗಿ, ಶಿವಾಜಿ ಶೇಳಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.