ದಾನಿ, ಖ್ಯಾತ ವೈದ್ಯ ಡಾ.ಸಂಪತಕುಮಾರ ಶಿವಣಗಿ ನಿಧನ

KannadaprabhaNewsNetwork |  
Published : Feb 12, 2025, 12:33 AM IST
ಕಕಕಕಕ | Kannada Prabha

ಸಾರಾಂಶ

ಖ್ಯಾತ ವೈದ್ಯ, ಅಮೆರಿಕದಲ್ಲಿದ್ದ ಭಾರತೀಯ ಸಾಂಸ್ಕೃತಿಕ ರಾಯಭಾರಿ, ದಾನಿ ಡಾ.ಸಂಪತಕುಮಾರ ಶಿವಣಗಿ (88) ಅ‍ವರು ಮಂಗಳವಾರ ಅಮೆರಿಕದಲ್ಲಿ ನಿಧನರಾದರು.

ಕನ್ನಡಪ್ರಭ ವಾರ್ತೆ ಬೆಳಗಾವಿ/ಅಥಣಿ

ಖ್ಯಾತ ವೈದ್ಯ, ಅಮೆರಿಕದಲ್ಲಿದ್ದ ಭಾರತೀಯ ಸಾಂಸ್ಕೃತಿಕ ರಾಯಭಾರಿ, ದಾನಿ ಡಾ.ಸಂಪತಕುಮಾರ ಶಿವಣಗಿ (88) ಅ‍ವರು ಮಂಗಳವಾರ ಅಮೆರಿಕದಲ್ಲಿ ನಿಧನರಾದರು.

ಮೂಲತಃ ಅಥಣಿಯವರಾದ ಡಾ.ಶಿವಣಗಿಯವರು ಕೆಎಲ್‌ಇ ಸಂಸ್ಥೆಯ ಆರ್‌ಎಲ್ ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ. ಮಾತ್ರವಲ್ಲ ಜೆಎನ್‌ಎಂಸಿಯಲ್ಲಿ 1974ರಿಂದ 1976ರವರೆಗೆ ಎರಡು ವರ್ಷ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಮುಂದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 1976ರಲ್ಲಿ ಅವರು ಅಮೆರಿಕಾಗೆ ಹೋಗಿ ಅಲ್ಲಿಯೇ ನೆಲೆಸಿದರು. ಅಮೆರಿಕೆಯ ಎಲ್ಲ ಅಧ್ಯಕ್ಷರ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಡಾ.ಶಿವಣಗಿಯವರಿಗೆ ಅಮೆರಿಕೆಯ ಅಧ್ಯಕ್ಷರ ಅಧಿಕೃತ ನಿವಾಸವಾಗಿರುವ ವೈಟ್‌ಹೌಸ್‌ಗೆ ಮುಕ್ತ ಪ್ರವೇಶವಿತ್ತು. ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಅಮೆರಿಕದ ಒಂದು ರಸ್ತೆಗೆ ಡಾ.ಶಿವಣಗಿ ಅವರ ಹೆಸರನ್ನಿಟ್ಟು ಅಮೆರಿಕ ದೇಶವು ಕೂಡ ಅವರಿಗೆ ಗೌರವ ನೀಡಿದೆ.ಎಲ್ಲಕ್ಕೂ ಮುಖ್ಯವಾಗಿ ಅವರು ಬೆಳಗಾವಿಯ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಗೆ ₹8 ಕೋಟಿ ದೇಣಿಗೆ ನೀಡಿ ಕೆಎಲ್‌ಇ ದಾನಿಗಳ ಪರಂಪರೆಯನ್ನು ಮುಂದುವರೆಸಿದ ಧೀಮಂತ ವ್ಯಕ್ತಿ. ಕೆಎಲ್‌ಇ ಸಂಸ್ಥೆಯು ಬೆಳಗಾವಿ ನಿರ್ಮಿಸಿದ ಕ್ಯಾನ್ಸರ್ ಆಸ್ಪತ್ರೆಗೆ ಜ.3 ರಂದು ಭಾರತದ ರಾಷ್ಟ್ರಪತಿ ಮುರ್ಮು ಅವರು ಕೆಎಲ್‌ಇ ಡಾ.ಸಂಪತಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಎಂದು ನಾಮಕರಣ ಮಾಡಿದ್ದರು.ಡಾ.ಶಿವಣಗಿ ಅವರ ಜೀವನ ಚರಿತ್ರೆಯನ್ನು ಡಾ.ಸರಜೂ ಕಾಟ್ಕರ್ ಅವರು ಭಾರತ ಅಮೆರಿಕೆಯ ಸಾಂಸ್ಕೃತಿಕ ರಾಯಭಾರಿ ಡಾ ಸಂಪತಕುಮಾರ ಶಿವಣಗಿ ಎಂಬ ಹೆಸರಿನಲ್ಲಿ ಬರೆದಿದ್ದಾರೆ. ಆ ಕೃತಿಯೂ ಅಂದೇ ಬಿಡುಗಡೆಗೊಂಡಿತ್ತು.ಅಥಣಿಯಲ್ಲೇ ಶಿಕ್ಷಣ:

ಅಥಣಿ ಪಟ್ಟಣದ ಶಿವಣಗಿ ಮನೆತನದಲ್ಲಿ ಜನಿಸಿದ ಡಾ. ಸಂಪತ್ ಕುಮಾರ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ್ದರು. ಬೆಳಗಾವಿಯ ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪೂರೈಸಿ 50 ವರ್ಷಗಳಿಂದ ಅಮೆರಿಕದ ಮಿಸ್ಸಿಸ್ಸಿಪಿಯಲ್ಲಿ ಮನು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ.ಸಂಪತ್ತಕುಮಾರ ಶಿವಣಗಿ ಅವರು ಭಾರತೀಯ ಮೂಲದ ಅಮೆರಿಕನ್ ಅಸೋಸಿಯೇಷನ್‌ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್‌ನಲ್ಲಿ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಎಎಪಿಐ ಮಿಸ್ಸಿಸ್ಸಿಪ್ಪಿಯ ಸ್ಥಾಪಕ ಅಧ್ಯಕ್ಷರಾಗಿ ಮತ್ತು ಶ್ವೇತಭವನದಲ್ಲಿ ನೇಮಕಗೊಂಡಾಗ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ವೈದ್ಯಕೀಯ ಹಾಗೂ ಅನೇಕ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅವರಿಗೆ ಅಮೆರಿಕ ಮತ್ತು ಭಾರತ ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.ಡಾ.ಪ್ರಭಾಕರ ಕೋರೆ ಸಂತಾಪ

ಡಾ.ಸಂಪತಕುಮಾರ ಶಿವಣಗಿಯವರು ನಿಧನ ಹೊಂದಿರುವ ಸಂಗತಿ ತೀವ್ರವಾದ ದುಃಖವನ್ನು ತಂದಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂತಹ ಒಬ್ಬ ದಾನಿಯನ್ನು, ಹೃದಯವಂತ ವೈದ್ಯನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಅವರ ಅಗಲಿಕೆ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಸಮಸ್ತ ಕೆಎಲ್‌ಇ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!