ಮೂಡುಬಿದಿರೆ: ಕಲಾ ಸಂಗೀತೋತ್ಸವ, ಸಾಧಕರಿಗೆ ಸನ್ಮಾನ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ಮೂಡುಬಿದಿರೆ ಸಾರವ ಸಂಗೀತ ಕಲಾ ಸಂಸ್ಥೆ ವತಿಯಿಂದ ‘ದಣಿದ ದನಿಗೆ ರಾಗದ ಬೆಸುಗೆ’ ಶೀರ್ಷಿಕೆಯೊಂದಿಗೆ ಸಮಾಜ ಮಂದಿರದಲ್ಲಿ ‘ಸಾರವ ಕಲಾಸಂಗೀತೋತ್ಸವ-2025’ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಹೆತ್ತವರು ಮಕ್ಕಳ ವ್ಯಕ್ತಿತ್ವದಲ್ಲಿ ಹುದುಗಿರುವ ಅದ್ಭುತ ಶಕ್ತಿ ಗುರುತಿಸಿ ಪ್ರೋತ್ಸಾಹಿಸುವ ಗುಣ ಬೆಳೆಸುವುದರ ಜತೆಗೆ ಒಳ್ಳೆಯ ವ್ಯಕ್ತಿಯಾಗಿ ಜವಾಬ್ದಾರಿಯುತ ಪ್ರಜೆಯಾಗು ಎಂಬುದನ್ನು ಹೇಳಿ ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಇಲ್ಲಿನ ಸಾರವ ಸಂಗೀತ ಕಲಾ ಸಂಸ್ಥೆ ವತಿಯಿಂದ ‘ದಣಿದ ದನಿಗೆ ರಾಗದ ಬೆಸುಗೆ’ ಶೀರ್ಷಿಕೆಯೊಂದಿಗೆ ಸಮಾಜ ಮಂದಿರದಲ್ಲಿ ನಡೆದ ‘ಸಾರವ ಕಲಾಸಂಗೀತೋತ್ಸವ-2025’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬದುಕು ಈಗ ಜಾರು ಬಂಡಿ ಆಟವಾಗಿದೆ. ಜಾರುವ ಹಂತದಲ್ಲಿ ಜಾರದೆ ಗಟ್ಟಿಯಾಗಿ ನಿಂತು ಏನು ಮಾಡಬೇಕೆಂಬುದೇ ಶಿಕ್ಷಣ ಎಂದ ಅವರು, ಸನಾತನ ಪರಂಪರೆಯ ಜೀವನ ಮೌಲ್ಯ ನಮ್ಮಲ್ಲಿ ಅಳವಡಿಸಿಕೊಂಡು ಮತ್ತೊಮ್ಮೆ ತಿರುಗಿ ಹಿರಿಯರ ಹೆಜ್ಜೆ ಗುರುತುಗಳನ್ನು ಅನುಸರಿಸುವ ಪ್ರಯತ್ನ ಮಾಡೋಣ ಎಂದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ‘ಮಾಯಕದ ಮಣಿದೀಪ ದೈವರಾಜೆ ಬಬ್ಬುಸ್ವಾಮಿ’ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿ, ಸಂಗೀತ ಮನಸಿನ ಒಳಗೆ ಮುದ ನೀಡುತ್ತದೆ. ಸಂಗೀತವನ್ನು ಎಡವಲು ಬಿಡಬೇಡಿ, ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಉದ್ಯಮಿ ಕೆ. ಶ್ರೀಪತಿ ಭಟ್ ಲಾಂಛನ ಅನಾವರಣಗೊಳಿಸಿದರು. ಉಡುಪಿ ಖ್ಯಾತ ವಾಗ್ಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಗುರು ಶಿಷ್ಯ ಪರಂಪರೆಯ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.

ಸಾಧಕರಿಗೆ ಸನ್ಮಾನ:

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಮಾಜ ಸೇವೆಯಲ್ಲಿ ಗೋಪಾಲಕೃಷ್ಣ ಕುಂದರ್, ಶೈಕ್ಷಣಿಕ ಕ್ಷೇತ್ರ ಡಾ.ಗುರುಪ್ರಸಾದ್ ಮಣಿಪಾಲ, ಸಂಗೀತ ಕ್ಷೇತ್ರ ಡಾ. ವೈಷ್ಣವಿ ರವಿ, ಮಾಧ್ಯಮ ಕ್ಷೇತ್ರ ರಾಮ್ ಅಜೆಕಾರ್, ವಿಜ್ಞಾನ ಕ್ಷೇತ್ರ ಮೌಲ್ಯ ವೈ ಜೈನ್, ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಶ್ರೇಷ್ಠ ಗೀತ ರಚನಾ ಪ್ರಶಸ್ತಿ ಪುರಸ್ಕೃತ ರಝಾಕ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಸಂಗೀತ ಪ್ರಮಾಣ ಪತ್ರ ವಿತರಿಸಿದರು.

ಸುನೀಲ್ ಪಣಪಿಲ ಸ್ವಾಗತಿಸಿದರು. ಸಾರವ ಕಲಾ ಸಂಗೀತೋತ್ಸವದ ಅಧ್ಯಕ್ಷ ವಿದ್ವಾನ್ ಯಶವಂತ ಎಂ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾರವ ಕಲಾ ಸಂಗೀತೋತ್ಸವದ ಕಾರ್ಯದರ್ಶಿ ನವೀನ್ ಕೋಟ್ಯಾನ್ ಹಾಗೂ ಕೋಶಾಧಿಕಾರಿ ದಿನೇಶ್ ಅಶ್ವಥಪುರ ಇದ್ದರು. ಸುನೀಲ್ ಪಣಪಿಲ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ನಿರೂಪಿಸಿ, ವಂದಿಸಿದರು.

Share this article