ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಶ್ರೀ ಮಂಗಿಶೆಟ್ಟಿ ನರಸಿಂಹಯ್ಯ ಶ್ರೀಮತಿ ರಂಗಮ್ಮ ಟ್ರಸ್ಟ್ ತಾಲೂಕಿನಾದ್ಯಂತ ಹಲವು ಸೇವಾ ಚಟುವಟಿಕೆಗಳ ಜೊತೆ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸೇವಾ ಕಾರ್ಯಗಳನ್ನು ಇತರ ಸಂಘ ಸಂಸ್ಥೆಗಳೂ ಅಳವಡಿಸಿಕೊಂಡಾಗ ಮಕ್ಕಳ ಶಿಕ್ಷಣ ಬದುಕಿಗೆ ಸಾರ್ಥಕ ಸಾಧನೆ ಆಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಹೇಳಿದರು.ಟ್ರಸ್ಟ್ ವತಿಯಿಂದ ನಗರ ಮತ್ತು ತಾಲೂಕಿನ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದಿನಿಂದಲೂ ಮಂಗಿಶೆಟ್ಟಿ ನರಸಿಂಹಯ್ಯ ರಂಗಮ್ಮ ಟ್ರಸ್ಟ್ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದು ಇನ್ನಿತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ನಗರ ಮಾತ್ರವಲ್ಲದೆ ತಾಲೂಕಿನ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 5000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡುವ ಮೂಲಕ ಟ್ರಸ್ಟಿನ ಆಡಳಿತ ಮಂಡಳಿಯವರು ಮಾದರಿಯಾಗಿದ್ದಾರೆ ಎಂದರು.
ಶಿಕ್ಷಣದಿಂದ ವಂಚಿತರಾಗದಿರಲಿಟ್ರಸ್ಟ್ ಅಧ್ಯಕ್ಷ ಎಂ.ಎನ್. ಕೃಷ್ಣಮೂರ್ತಿ ಮಾತನಾಡಿ, ಒಂದೊಂದು ನಯಾ ಪೈಸೆ ಕೂಡಿಟ್ಟು ಬದುಕು ಕಟ್ಟಿಕೊಂಡು ಬಂದ ದಿ.ನರಸಿಂಹಯ್ಯನವರು ಅಂದಿನ ದಿನಗಳಲ್ಲಿಯೇ ಮಕ್ಕಳ ಮುಂದಿನ ಶೈಕ್ಷಣಿಕ ಬದುಕಿನ ಬಗ್ಗೆ ದೂರದ ಆಲೋಚನೆ ಇಟ್ಟು ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದೊಂದಿಗೆ ಇಂತಹ ಸೇವಾ ಕಾರ್ಯಕ್ಕೆ ಮುಂಚೂಣಿಯಾಗಿ ನಿಂತರು. ಅವರ ಆಸೆಯಂತೆ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಭಾಗ್ಯ ನಮಗೆ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಎನ್. ಆರ್. ಟ್ರಸ್ಟ್ ಕಾರ್ಯದರ್ಶಿ ಉತ್ತಮ್ ಚಂದ್ ಜೈನ್, ಉಪಾಧ್ಯಕ್ಷ ಜಿ.ವಿ.ನಾಗರಾಜ್, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಸದಸ್ಯರಾದ ರಘುರಾಮ್, ಎ.ವಿ. ಬೈರೇಗೌಡ, ಪೋಸ್ಟ್ ಕೃಷ್ಣಮೂರ್ತಿ, ಎಂ. ಕೃಷ್ಣಪ್ಪ, ಸತ್ಯನಾರಾಯಣ, ಲಕ್ಷ್ಮಣಮೂರ್ತಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಂಜುಂಡರಾಮಯ್ಯ ಶ್ರೇಷ್ಟಿ, ನಗರ ಸಿ.ಆರ್.ಪಿ. ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ. ಜೆ. ಶ್ರೀನಿವಾಸ್, ನಜಿರ್, ತಾಲೂಕಿನ ವಿವಿಧ ಕ್ಲಸ್ಟರ್ ಸಿ.ಆರ್.ಪಿ. ಗಳು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.-