ಕೋವಿಡ್‌ ಬಗ್ಗೆ ಭಯ ಬೇಡ, ಮುಂಜಾಗ್ರತೆ ಇರಲಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌

KannadaprabhaNewsNetwork |  
Published : Dec 31, 2023, 01:31 AM IST
ಫೋಟೋ- 30ಜಿಬಿ9 ಮತ್ತು 30ಜಿಬಿ11ಕಲಬುರಗಿ ಜಿಲ್ಲಾಡಳಿತದಿಂದ ಕೋವಿಡ್‌ ರೂಪಾಂತರಿ ತಳಿ ಕುರಿತಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಡಿಸಿ ಫೌಜಿಯಾ ತರನ್ನುಮ್‌ ನಡೆಸಿ ಮಾಹಿತಿ ಪಡೆದರು | Kannada Prabha

ಸಾರಾಂಶ

ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಡೀಸಿ ಫೌಜಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಲಬುರಗಿ ಜಿಲ್ಲಾಡಳಿತದಿಂದ ಕೋವಿಡ್‌ ರೂಪಾಂತರಿ ತಳಿ ಕುರಿತಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋವಿಡ್ ಜೆಎನ್-1 ಕುರಿತು ಅನಗತ್ಯ ಭಯ, ಗೊಂದಲ ಬೇಡ. ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಿದರೆ ಸಾಕು ಎಂಬ ಅರಿವು ಜಿಲ್ಲೆಯ ಜನತೆಯಲ್ಲಿ ಮೂಡಿಸುವತ್ತ ಹೆಚ್ಚು ಗಮನಹರಿಸಿ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶನಿವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು, ತಾಪಂ ಇಒಗಳೊಂದಿಗೆ ಕೋವಿಡ್ ಜೆಎನ್-1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಭೆ ನಡೆಸಿದ ಅವರು, ಸೋಂಕು ಹೆಚ್ಚಾದಲ್ಲಿ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮದ ಬಗ್ಗೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು ಡ್ರೈ ರನ್ ಮಾಡಿ ಸನ್ನಧರಾಗಿರಬೇಕು. ಬೆಡ್, ಆಕ್ಸಿಜನ್ ವೆಂಟಿಲೇಟರ್, ಎಲ್ಲಾ ಮೂಲಸೌಕರ್ಯ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ತಹಸೀಲ್ದಾರರು, ಇಒ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಇದರ ಮೇಲೆ ನಿಗಾ ವಹಿಸಬೇಕು ಎಂದರು.

ಮಾಸ್ಕ್‌ ಬಳಸುವಂತೆ ಅರಿವು ಮೂಡಿಸಿ: ಶಾಲಾ, ವಸತಿ ನಿಲಯ, ಸರ್ಕಾರಿ ಕಚೇರಿ, ಮಾಲ್ ಸೇರಿದಂತೆ ಹೆಚ್ಚು ಜನ ಸಮೂಹ ಸೇರುವ ಕಡೆ ಸ್ಯಾನಿಟೈಸರ್, ಮಾಸ್ಕ್ ಬಳಕೆಗೆ ಅರಿವು ಮೂಡಿಸಬೇಕು. ಮಕ್ಕಳು, ಗರ್ಭಿಣಿ ಮಹಿಳೆಯರು, 60 ವರ್ಷ ಮೇಲ್ಪಟ್ಟ ಹಿರಿಯರು ಹೆಚ್ಚಿನ ಆರೋಗ್ಯ ಕಾಳಜಿ ವಹಿಸಬೇಕು, ಅನಗತ್ಯ ಪ್ರಯಾಣ ಮಾಡಬಾರದೆಂದು ಅವರಿಗೆ ತಿಳಿ ಹೇಳಬೇಕು ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಹೊಸದಾಗಿ ಕೋವಿಡ್ ಪತ್ತೆಯಾದ ಐವರ ಅರೋಗ್ಯ ಸ್ಥಿತಿಗತಿ ಕುರಿತು ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು,

ಪ್ರಸ್ತುತ‌ ಚಳಿಗಾಲ ಇರುವುದರಿಂದ ಫ್ಲೂ ಇದ್ದು, ಗಾಬರಿ ಆಗುವುದು ಬೇಡ. ರಾಜ್ಯ ಸರ್ಕಾರದ ನಿರ್ದೇಶನದಂತೆ ಸಾರಿ, ಜ್ವರ, ಶೀತ, ಕೆಮ್ಮು, ನೆಗಡಿ ಇದ್ದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಡಿಎಚ್‌ಒ ಡಾ.ರಾಜಶೇಖರ ಮಾಲಿ ಮಾತನಾಡಿ, ಇತ್ತೀಚೆಗೆ ದೇಶದೆಲ್ಲಡೆ ಜೆಎನ್-1 ತಳಿ ಪತ್ತೆಯಾದ ನಂತರ ಜಿಲ್ಲೆಯಲ್ಲಿ ಇದುವರೆಗೆ ಸಾರಿ, ಐ‌ಎಲ್‌ಐ ಕೋಮಾರ್ಬಿಡ್ ಹಿನ್ನೆಲೆ ಹೊಂದಿರುವ 683 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದ್ದು, ಇದರಲ್ಲಿ 5 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಐವರಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ 8 ವರ್ಷದ ಬಾಲಕಿ ಜಿಮ್ಸ್ ಅಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಆರೋಗ್ಯ ಸ್ಥಿರವಾಗಿದೆ. ಉಳಿದಂತೆ ನಾಲ್ವರು ಹೋಮ್‌ ಐಸೋಲೇಷನ್ ನಲ್ಲಿದ್ದು, ಆರೋಗ್ಯ ಸಿಬ್ಬಂದಿ ಅವರ ಮೇಲೆ ನಿಗಾ ವಹಿಸಿದ್ದಾರೆ ಎಂದರು.

ಜಿಮ್ಸ್‌ನಲ್ಲಿ 2 ಆಕ್ಸಿಜನ್ ಪ್ಲ್ಯಾಂಟ್, ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಕಾರ್ಯಚರಣೆಯಲ್ಲಿದೆ. ಜಿಮ್ಸ್‌ನಲ್ಲಿ 50, ತಾಲೂಕು ಆಸ್ಪತ್ರೆಯಲ್ಲಿ ತಲಾ 20 ಐಸೋಲೇಷನ್ ಬೆಡ್ ಕಾಯ್ದಿರಿಸಿದೆ. ಸರ್ಕಾರಿ ಅರೋಗ್ಯ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.

ಎಸ್.ಪಿ. ಅಡ್ಡೂರು ನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ಅವರು ಕೋವಿಡ್ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಅಡಳಿತ ವಿಭಾಗದ ಉಪ ಆಯುಕ್ತ ಮಾಧವ ಗಿತ್ತೆ, ಸಹಾಯಕ ಆಯುಕ್ತರಾದ

ರೂಪಿಂದರ್ ಕೌರ್, ಆಶಪ್ಪ ಪೂಜಾರಿ, ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್., ಆರ್.ಸಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಸೇರಿದಂತೆ ತಹಸೀಲ್ದಾರರು, ಇಒ, ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ