ಕಾರಟಗಿ: ಸುದ್ದಿ ಮಾಡುವುದಷ್ಟೇ ಪತ್ರಕರ್ತರ ಜವಾಬ್ದಾರಿಯಾಗಬಾರದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ವ್ಯಕ್ತಿಯ ತೇಜೋವಧೆ ಮಾಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪ್ರಸ್ತುತ ದಿನಗಳಲ್ಲಿ ಪತ್ರಿಕೆ ನಡೆಸುವುದು ಸುಲಭದ ಕೆಲಸವಲ್ಲ. ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಸಲಾಗುವುದಿಲ್ಲ. ಟೀಕೆ ಮಾಡಿ ಬರೆಯುವ ಶಕ್ತಿ ಪತ್ರಕರ್ತರಿಗಿದೆ. ಆದರೆ ಟೀಕೆ ಭರದಲ್ಲಿ ಏನೇನೋ ಟೀಕೆ ಮಾಡಬಾರದು. ಅರ್ಥಗರ್ಭಿತವಾದ ಟೀಕೆಗೆ ಆದ್ಯತೆ ನೀಡಬೇಕು ಎಂದರು.
ಪತ್ರಕರ್ತರು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರೆಯುವುದಕ್ಕೂ ಸತ್ಯ ಬರೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸತ್ಯಾಸತ್ಯತೆ ಅರಿತುಕೊಳ್ಳುವ ಅವಶ್ಯಕತೆ ಇದೆ. ಹಾಗೆಯೇ ಅವರ ಹೇಳಿಕೆಯೂ ಪಡೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ಚಾಕುವಿಗಿಂತ ಹರಿತವಾದುದ್ದು ಲೇಖನಿ ಮಾತ್ರ. ಜೀವನದೊಳಗೆ ಬದಲಾವಣೆ ಮಾಡುವ ಶಕ್ತಿ ಲೇಖನಿಗೆ ಮತ್ತು ಪತ್ರಿಕಾರಂಗಕ್ಕೆ ಮಾತ್ರವಿದೆ ಎಂದರು.ಪತ್ರಿಕಾ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಕಳೆದ ವರ್ಷದಿಂದ ಸರ್ಕಾರ ಕೊಡುತ್ತಿದೆ. ಪ್ರತಿವರ್ಷ ಪತ್ರಿಕಾರಂಗದಲ್ಲಿ ಉತ್ತಮ ಸೇವೆಗೈದ ಪತ್ರಕರ್ತರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿತ್ತು. ಅದರೊಂದಿಗೆ ಪತ್ರಿಕಾ ವಿತರಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಅವರ ಆದೇಶದ ಮೇರೆಗೆ ಸಮಿತಿ ರಚಿಸಿ, ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಹಿರೇಮಠದ ಮರುಳ ಸಿದ್ಧಯ್ಯ ಸ್ವಾಮಿ ಸಾನ್ನಿಧ್ಯವಹಿಸಿದ್ದರು. ಶಿಕ್ಷಕಿ ಅಮರಮ್ಮ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪತ್ರಕರ್ತ ಶರಣಪ್ಪ ಕೊಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.