ಜಾತಿಗಣತಿಯಲ್ಲಿ ಏನೇ ಬರೆಯಿಸಿದರೂ ನಿರ್ಬಂಧವಿಲ್ಲ: ಸಚಿವ ತಂಗಡಗಿ

KannadaprabhaNewsNetwork |  
Published : Sep 15, 2025, 01:01 AM IST
ಫೊಟೊ ವಿವರ-14-ಕೆಆರ್‌ಟಿ-1-ಕಾರಟಗಿ: ಸಚಿವ ಶಿವರಾಜ ತಂಗಡಗಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಬಿಜೆಪಿಯವರು ಹೇಳಿದಂತೆ ಜನಗಣತಿ ಕಾಲಂನಲ್ಲಿ ಬರೆಸಲಾಗುವುದಿಲ್ಲ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ ಮಾಡಲಾಗುವುದಿಲ್ಲ. ಅವರಿಗೆ ಏನು ಗೊತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಕಾರಟಗಿ: ಜಾತಿ ಗಣತಿ ಕಾಲಂನಲ್ಲಿ ಬರೆಸುವುದು ಅವರವರಿಗೆ ಬಿಟ್ಟಿದ್ದು. ಯಾರಿಗೂ ಹೀಗೆಯೇ ಬರೆಸಿರಿ ಎಂದು ನಾವು ಹೇಳುವುದಿಲ್ಲ. ಅವರು ಏನು ಹೇಳುತ್ತಾರೆಯೋ ಅದನ್ನು ಸಮೀಕ್ಷೆ ಮಾಡುವವರು ಬರೆದುಕೊಳ್ಳುತ್ತಾರೆ ಅಷ್ಟೇ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನೆಗೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹುದೇ ಬರೆಸಬೇಕೆಂಬ ನಿಯಮ ಮಾಡಿಲ್ಲ. ಎಲ್ಲರೂ ಸರ್ವ ಸ್ವತಂತ್ರರು. ಕಾಲಂನಲ್ಲಿ ಹೆಸರಿಲ್ಲದಿದ್ದರೆ ಇತರರು ಎಂದು ಇರುತ್ತದೆ. ಅದರಲ್ಲಿ ನೀವು ನಿಮಗೆ ಬೇಕಾದ್ದು ಬರೆಸಬಹುದು. ಕ್ರಿಶ್ಚಿಯನ್ ಎಂದು ಬೇರೆ ಧರ್ಮದವರು ಬರೆಸಿದ್ದರೆ ಅವರು ಕ್ರಿಶ್ಚಿಯನ್‌ರಾಗುತ್ತಾರೆಯೇ ವಿನಃ ಬೇರೆ ಏನೂ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಹೇಳಿದಂತೆ ಜನಗಣತಿ ಕಾಲಂನಲ್ಲಿ ಬರೆಸಲಾಗುವುದಿಲ್ಲ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ ಮಾಡಲಾಗುವುದಿಲ್ಲ. ಅವರಿಗೆ ಏನು ಗೊತ್ತಿದೆ? ಅವರು ರಾಜ್ಯದ ಬಡವರ, ದಲಿತರ ಬಗ್ಗೆ ಚಿಂತನೆ ಮಾಡುವುದಿಲ್ಲ. ರಾಜ್ಯದ ಕೆಳಮಟ್ಟದ ಜನರ ಕುರಿತು ಚರ್ಚೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಕೊಡುವ ಕೆಲಸ ಮಾಡಿದ್ದಾರಾ? ಅದ್ಯಾವುದೂ ಮಾಡಿಲ್ಲ. ಬರಿ ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ. ಇವು ಯಾವುದೇ ಬೆಂಕಿ ಸಿಗದೇ ಇದ್ದಲ್ಲಿ ಕೊನೆಗೆ ಪಾಕಿಸ್ತಾನ, ಮುಸ್ಲಿಂ, ಹಿಂದೂ, ಇದು ಯಾವುದು ಕೆಲಸ ಮಾಡದಿದ್ದರೆ ಪಾಕಿಸ್ತಾನ ಇಂಡಿಯಾ ಇಷ್ಟೇ ಬಿಜೆಪಿಯವರ ಕೆಲಸ ಎಂದು ಹೇಳಿದರು.

ಮದ್ದೂರ ಗಣೇಶನ ಮೆರವಣಿಗೆ ಗಲಾಟೆಯಲ್ಲಿ ಬಿಜೆಪಿಯವರು ಬಡವರ ಮಕ್ಕಳಿಗೆ ಪ್ರಚೋದನೆ ನೀಡಿ ಪ್ರತಿಭಟನೆಗೆ ಹಚ್ಚಿ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಗಣೇಶ ಎಲ್ಲರ ಸ್ವತ್ತು. ಬಿಜೆಪಿ ನಾಯಕರ ಮಕ್ಕಳು ಗಣೇಶನ ಮೆರವಣಿಗೆಯಲ್ಲಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮ್ಮ ಮಕ್ಕಳಿಗೆ ಫಾರಿನ್‌ಗೆ ಕಳುಹಿಸುತ್ತಾರೆ. ಅವಘಡಗಳಲ್ಲಿ ಸಿಲುಕಿಕೊಳ್ಳುವವರು, ಅನಾಹುತಕ್ಕೆ ಈಡಾಗುವರು ಬಡ ಹಿಂದೂಗಳ ಮಕ್ಕಳು ಎಂದು ಪ್ರವೀಣನ ತಂದೆ ಹೇಳಿದ್ದಾರೆ ಎಂದರು. ಪ್ರತಾಪ ಸಿಂಹ ಅವರನ್ನು ಗಡೀಪಾರು ಮಾಡಬೇಕು ಎಂಬುದಕ್ಕೆ ಉತ್ತರಿಸಿದ ಸಚಿವರು, ಪ್ರತಾಪಸಿಂಹ ಒಬ್ಬರನ್ನೆ ಅಲ್ಲ, ಬಿಜೆಪಿಯ ಎಲ್ಲರನ್ನೂ ಗಡೀಪಾರು ಮಾಡಬೇಕು. ಪಾಕ್ ಪರವಾಗಿ ಘೋಷಣೆ ಕೂಗಿದ್ದು ಶಿವಮೊಗ್ಗ ಅಷ್ಟೇ ಅಲ್ಲ, ಬೇರೆ ಎಲ್ಲೆ ಕೂಗಿದ್ರೂ ಒದ್ದು ಒಳಗೆ ಹಾಕುತ್ತವೆ. ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ