ಅನ್ನಕ್ಕೆ ಕನ್ನ ಹಾಕಿಕೊಳ್ಳಬೇಡಿ: ಎಸ್ಪಿ ಶ್ರೀಹರಿಬಾಬು

KannadaprabhaNewsNetwork | Published : Mar 10, 2025 12:15 AM

ಸಾರಾಂಶ

ಹಂಪಿ ಎಲ್ಲರಿಗೂ ಅನ್ನ ಒದಗಿಸುತ್ತಿದೆ. ಸಣಾಪುರದಂತ ಘಟನೆಗಳಿಗೆ ಆಸ್ಪದ ನೀಡಿದರೆ, ಅನ್ನಕ್ಕೆ ಕನ್ನ ಹಾಕಿಕೊಳ್ಳಬೇಕಾಗುತ್ತದೆ.

ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳ ಮಾಲೀಕರ ಸಭೆಯಲ್ಲಿ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿ ಎಲ್ಲರಿಗೂ ಅನ್ನ ಒದಗಿಸುತ್ತಿದೆ. ಸಣಾಪುರದಂತ ಘಟನೆಗಳಿಗೆ ಆಸ್ಪದ ನೀಡಿದರೆ, ಅನ್ನಕ್ಕೆ ಕನ್ನ ಹಾಕಿಕೊಳ್ಳಬೇಕಾಗುತ್ತದೆ. ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳ ಮಾಲೀಕರು ನಿಯಮ ಪಾಲನೆಯೊಂದಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಅಪರಿಚಿತರ ಚಲನವಲನದ ಬಗ್ಗೆ ನಿಗಾವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ವಿಜಯನಗರ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಎಚ್ಚರಿಕೆ ನೀಡಿದರು.

ಹಂಪಿ ಪ್ರವಾಸಿ ಪೊಲೀಸ್‌ ಠಾಣೆ ಎದುರು ಭಾನುವಾರ ನಡೆದ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿ ಉತ್ಸವ ಈಗಾಗಲೇ ಮುಗಿದಿದೆ. ಜಿ-20 ಶೃಂಗಸಭೆ ಕೂಡ ಹಂಪಿಯಲ್ಲಿ ನಡೆದಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ವಿದೇಶಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಾರೆ. ಹಾಗಾಗಿ ಅವರ ಸುರಕ್ಷತೆ ನಮ್ಮೆಲ್ಲರ ಹೊಣೆ ಆಗಿದೆ. ಹೋಂ ಸ್ಟೇಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕು. ಪ್ರವಾಸಿಗರ ಮಾಹಿತಿ ಪಡೆದುಕೊಳ್ಳಬೇಕು. ಅಪರಿಚಿತರ ಚಲವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಬೇಕು ಎಂದರು.

ಅನಧಿಕೃತ ಗೈಡ್‌ಗಳು ಹಾಗೂ ಕೆಲ ಸಾಮಾಜಿಕ ಜಾಲತಾಣದ ಟ್ರೋಲ್‌ ಪೇಜ್‌ಗಳ ಮೇಲೂ ಜಿಲ್ಲಾ ಪೊಲೀಸ್ ಇಲಾಖೆ ನಿಗಾವಹಿಸಿದೆ. ಹಂಪಿಯಲ್ಲಿ ಹಂಪಿ ಪ್ರವಾಸಿ ಠಾಣೆ, ಸಂಚಾರ ಠಾಣೆ ಇದೆ. ಕಮಲಾಪುರದಲ್ಲೂ ಪೊಲೀಸ್‌ ಠಾಣೆ ಇದೆ. ಡಿವೈಎಸ್ಪಿ ಕಚೇರಿಗೂ ಪತ್ರ ಬರೆಯಲಾಗಿತ್ತು. ಅಪರಾಧ ಸಂಖ್ಯೆಗಳ ಆಧರಿಸಿ ಡಿವೈಎಸ್ಪಿ ಕಚೇರಿ ನೀಡಲಾಗುತ್ತದೆ ಎಂದರು.

ಹಂಪಿ ಪ್ರದೇಶದಲ್ಲಿ ಸೈಕಲ್‌ ಹಾಗೂ ಬೈಕ್‌ಗಳು ಪ್ರವಾಸಿಗರಿಗೆ ಸಲೀಸಾಗಿ ದೊರೆಯುತ್ತಿದೆ. ಸಮಯ ನಿಗದಿಗೊಳಿಸಿ ನೀಡುವ ಪ್ರಕ್ರಿಯೆ ಮಾಡಬೇಕು. ಬೆಂಗಳೂರಿನಿಂದ ಬರುವ ಬಸ್‌ಗಳು ಹಂಪಿ ಬೋರ್ಡ್‌ ಹಾಕಿಕೊಂಡಿರುತ್ತವೆ. ಹಂಪಿಗೆ ಬರುವುದಿಲ್ಲ, ಇನ್ನೂ ಗೋವಾದಿಂದ ಬರುವ ಬಸ್‌ಗಳ ಸ್ಥಿತಿಯೂ ಅಷ್ಟೇ. ಈ ಬಗ್ಗೆ ಕ್ರಮವಹಿಸಬೇಕು. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಹಿಂಬದಿಯಲ್ಲಿರುವ ವಾಟರ್‌ ಫಾಲ್ಸ್‌ಗೆ ಪ್ರವಾಸಿಗರು ರಾತ್ರಿ ಹೊತ್ತಿನಲ್ಲೂ ತೆರಳುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಕ್ರಮವಹಿಸಬೇಕು. ಅನಧಿಕೃತ ಗೈಡ್‌ಗಳು ಪ್ರವಾಸಿಗರ ಜತೆಗೆ ಅನುಚಿತವಾಗಿ ವರ್ತನೆ ತೋರುತ್ತಾರೆ. ಇಂತಹವರ ವಿರುದ್ಧವೂ ಕ್ರಮ ಜರುಗಿಸಬೇಕು. ಹಂಪಿಯಲ್ಲಿ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಹೆಲ್ಫ್‌ ಡೆಸ್ಕ್‌ ತೆರೆಯಬೇಕು ಎಂದು ಹೋಂ ಸ್ಟೇ ಮಾಲೀಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಶ್ರೀಹರಿಬಾಬು, ನಮ್ಮ ಹಕ್ಕು ಪಡೆದಂತೆ, ಕರ್ತವ್ಯ ಎಲ್ಲರೂ ಪಾಲಿಸಬೇಕು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಸಂಬಂಧಿಸಿದ ಇಲಾಖೆಗಳ ಜತೆಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಎಲ್ಲರೂ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು.

ಹೋಂ ಸ್ಟೇ ಮಾಲೀಕರಾದ ರಾಮು, ಪ್ರಶಾಂತ್‌, ಕಿರಣಕುಮಾರ, ನಾಗರಾಜ, ವಿರೂಪಾಕ್ಷಿ, ರಾಕೇಶ್, ಪಾಲಾಕ್ಷಿ, ಮಹೇಶಕುಮಾರ, ಗೈಡ್‌ಗಳಾದ ಮಂಜುನಾಥ ಗೌಡ, ಡಾ. ವಿಶ್ವನಾಥ ಮಾಳಗಿ, ಈರಣ್ಣ ಪೂಜಾರಿ, ಪಿಎಸ್‌ಐಗಳಾದ ಶಿವಕುಮಾರ, ಸಂತೋಷ್‌ ಮತ್ತಿತರರಿದ್ದರು.

Share this article