ಅಂತಾರಾಷ್ಟ್ರೀಯ ಮಹಿಳಾ ದಿನ । ವಿವಿಧ ಮಹಿಳಾ ಸಾಧಕರಿಗೆ ಸನ್ಮಾನ
ಒಂದಾನೊಂದು ಕಾಲದಲ್ಲಿ ಮನೆಯ ಹೊಸಲು ದಾಟಲಾರದ ಪರಿಸ್ಥಿತಿಯಿಂದ ಹೊರಬಂದು ಬಾಹ್ಯಾಕಾಶಕ್ಕೆ ಹಾರುವ ಮಟ್ಟಿಗೆ ಮಹಿಳೆಯರು ಬೆಳೆದಿದ್ದಾರೆ. ಇದು ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕು ಎಂದು ರಾಜ್ಯ ಮಹಿಳಾ ಸಹಕಾರಿ ಮಹಾ ಮಂಡಳಿ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.
ನಗರದ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದಿಂದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಕುಟುಂಬದ ನಿರ್ವಹಣೆ ಜೊತೆಗೆ ಉದ್ಯೋಗದ ಜವಾಬ್ದಾರಿ ಕೂಡ ಅನೇಕರು ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣದ ಜತೆಗೆ ವಿಶೇಷ ತರಬೇತಿ ಪಡೆಯಬೇಕು. ಆ ಮೂಲಕ ಉದ್ಯೋಗ ನಿರ್ವಾಹಣೆಯಿಂದ ಆರ್ಥಿಕ ಪ್ರಗತಿ ಸಾಧಿಸಿ ಸಬಲರಾಗಬೇಕು ಎಂದು ತಿಳಿಸಿದರು.
ಈ ವೇಳೆ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಶಕುಂತಲಾ ಬೆಲ್ದಾಳೆ ಅವರನ್ನು ರಾಜ್ಯ ಮಟ್ಟದ ಅಕ್ಕಮಹಾದೇವಿ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ, ಭಾಷಣ, ಗಾಯನ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶೃತಿ ಹಿರೇಮಠ ನಿರೂಪಿಸಿ ವಂದಿಸಿದರು.