ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಾಮೀಣ ಜನತೆ ಬಹುದಿನಗಳ ಕನಸು ಇಂದು ಈಡೇರಿದೆ. ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಸುಸುಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಲಿದೆ. ಈ ಸಮುದಾಯ ಭವನ ಶೈಕ್ಷಣಿಕ ಕಾರ್ಯಕ್ಕೆ, ಸಭೆ ಹಾಗೂ ಸಮಾರಂಭಗಳಿಗೆ ಅನುಕೂಲವಾಗಲಿ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ತಾಲೂಕಿನ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಮಂಜೂರಾದ ₹1.75 ಕೋಟಿ ನೂತನ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಸಹೋದರಿಯರು ಜೀವನದಲ್ಲಿ ತಮ್ಮ ಗುರಿ ತಲುಪಬೇಕೆಂದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೀಗಾದಾಗ ಮಾತ್ರ ಮಹಿಳೆಯರು ಒಳ್ಳೆಯ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಜತೆಗೆ ರಾಜಕೀಯಕ್ಕೂ ಬರಲು ಶಿಕ್ಷಣ ಅವಶ್ಯಕತೆ ಇದೆ. ಬಡ ಹೆಣ್ಣುಮಕ್ಕಳು ಬೆಳೆದಾಗ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ಹೇಳಿದರು.
ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂದಿರಗಳ ಅಭಿವೃದ್ಧಿ ಜೊತೆಗೆ ಕಾರ್ಯಾಲಯಗಳ ನಿರ್ಮಾಣಕ್ಕೆ ಅಪಾರ ಅನುದಾನ ನೀಡಿದ್ದಾರೆ. ಈಗಾಗಲೇ ಕ್ಷೇತ್ರಾದ್ಯಂತ ಸುಸುಜ್ಜಿತ ರಸ್ತೆ ನಿರ್ಮಾಣ, ಮರು ರಸ್ತೆ ಅಗಲೀಕರಣ , ಶುದ್ಧ ಕುಡಿಯುವ ನೀರಿನ ಯೋಜನೆ, ಶಿಥಿಲಗೊಂಡ ಶಾಲಾ ಕಟ್ಟಡ ಅಭಿವೃದ್ಧಿ ಕಾರ್ಯ, ಗ್ರಾಮಗಳಲ್ಲಿನ ಚರಂಡಿ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.ಮಹಿಳೆಯರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮ ಕಚೇರಿ ಭೇಟಿ ನೀಡಿ, ನಿಮ್ಮೆಲ್ಲ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ, ನಿಮ್ಮ ಶ್ರೇಯಸ್ಸಿಗೆ ಸದಾ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಸಚಿವರ ಆಪ್ತ ಸಹಾಯಕ ಅರವಿಂದ ಕಾರ್ಚಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿಯವರು ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ ಬಹಳಷ್ಟು ಅನುದಾನ ನೀಡಿದ್ದಾರೆ. ಅದರಂತೆಯೇ ಈ ಗ್ರಾಮದ ಜನತೆಯ ಕನಸನ್ನು ಈಡೇರಿಸಿದ್ದಾರೆ. ಇದರಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಪ್ರಯತ್ನವೂ ಇದೆ. ಈಗಾಗಲೇ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣ ₹1.75 ಕೋಟಿ ಬಿಡುಗಡೆಯಾಗಿದೆ. ಇನ್ನೂ ಒಂದು ಕೋಟಿ ರೂ. ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.ಅಣ್ಣಾಸಾಬ್ ಜೊಲ್ಲೆಯವರು ಮತ ಹಾಕಿಸಿಕೊಂಡ ಹೋದವರು ಇನ್ನೂ ಪತ್ತೆಯಿಲ್ಲ. ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರು ಸಂಸದೆಯಾಗಿ ನಾಲ್ಕೈದು ತಿಂಗಳಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಕಲಕಾಂಬ ಸೇರಿದಂತೆ ಪ್ರತಿ ಗ್ರಾಮಕ್ಕೂ ₹3-4 ಕೋಟಿ ಅನುದಾನ ನೀಡಿದ್ದಾರೆ ಎಂದರು.
ಮುಚ್ಚಂಡಿ ಗ್ರಾಪಂ ಅಧ್ಯಕ್ಷ ಸಂದೀಪ ಜಖಾನೆ ಮಾತನಾಡಿದರು. ಈ ವೇಳೆ ದೇವಸ್ಥಾನ ಕಮೀಟಿ ಅಧ್ಯಕ್ಷ ಮಲ್ಲಪ್ಪಾ ಪಾಟೀಲ, ಉಪಾಧ್ಯಕ್ಷ ಸುನೀತಾ ಗುಡದೇಗೋಳ, ಜಿಪಂ ಮಾಜಿ ಸದಸ್ಯೆ ಮಲ್ಲವ್ವಾ ಬುಡರಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪಾ ಮುದಗೇಕರ್, ಪರಶುರಾಮ ಭಾತಕಂಡೆ, ಮಹಾನಿಂಗ ವಾಲಿಶೇಟ್ಟಿ, ಸುದರ್ಶನ ಕನಗಾವಕರ್ , ಯಲ್ಲಪ್ಪ ಚೌಗಲೆ, ಗಜಾನನ ವರ್ಪೆ ಹಾಗೂ ಇತರರು ಇದ್ದರು.