ಬ್ಯಾಡಗಿ: ಬಡವರನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸಿ ಸೌಲಭ್ಯ ವಂಚಿತ ಮಾಡುವುದು ಬೇಡ, ರಾಜಕೀಯ ಮುಕ್ತ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕಳೆದ 2017ರಲ್ಲಿ ಅಂತಿಮಗೊಳಿಸಿದ್ದ 813 ಜನರಲ್ಲಿಯೇ ಲಭ್ಯವಿದ್ದಷ್ಟು ಆಶ್ರಯ ನಿವೇಶನಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಶುಕ್ರವಾರ ನಡೆದ ಪುರಸಭೆ ಸಾಮಾನ್ಯಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಕೆಲ ದಿನದಿಂದ ಪಟ್ಟಣದಲ್ಲಿ ಹರಡಿದ್ದ ಸುಳ್ಳು ವದಂತಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ ತೆರೆ ಎಳೆದರು.
ಕೊಳಚೆ ನಿರ್ಮೂಲನಾ ಮಂಡಳಿ ಫಲಾನುಭವಿಗಳ ತಾಳೆಯಾಗಲಿ: ಸದಸ್ಯ ಬಿ.ಎಂ. ಛತ್ರದ ಮಾತನಾಡಿ, ಸ್ಲಮ್‌ಬೋರ್ಡ್‌ನಿಂದ ಮನೆ ಕಟ್ಟಿಸಿಕೊಂಡವರ ಆಸ್ತಿಗಳ ಇ-ಸೊತ್ತು ಪ್ರಕ್ರಿಯೆ ನಡೆಸಿ ಅದರ ಫಲಾನುಭವಿಗಳನ್ನು ಆಶ್ರಯ ಪಟ್ಟಿಯಿಂದ ಕೈಬಿಡಬೇಕು ವಿತರಿಸುವ ಅಷ್ಟೂ ಮನೆಗಳು ವಸತಿ ರಹಿತರಿಗೆ ತಲುವುವಂತೆ ಮಾಡುವುದು ಪುರಸಭೆ ಸದಸ್ಯರು ಮತ್ತು ಶಾಸಕರ ಮೇಲೆ ಗುರುತರ ಜವಾಬ್ದಾರಿ ಇದೆ. ಸದರಿ ವಿಷಯದಲ್ಲಿ 28 ಜನ ಸದಸ್ಯರೂ ನಿಮಗೆ ಸಾಥ ನೀಡಲಿದ್ದೇವೆ ಎಂದರು.
ಆಸ್ತಿ ತೆರಿಗೆ ಶೇ.3ರಷ್ಟು ಏರಿಕೆ:ವಿಷಯದ ಕುರಿತು ಮಾತನಾಡಿದ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸರ್ಕಾರದ ನಿರ್ದೇಶನದಂತೆ ಶೇ.5ರಷ್ಟು ತೆರಿಗೆ ಏರಿಕೆ ಮಾಡಲು ಅವಕಾಶವಿದೆ. ಆದರೆ ಇದರಿಂದ ಬಡವರಿಗೆ ಹೆಚ್ಚಿನ ಹೊರೆಯಾಗಲಿದ್ದು ಶೇ.3ರಷ್ಟು ತೆರಿಗೆಯನ್ನು ಹೆಚ್ಚಿಸೋಣವೆಂದು ಸಭೆಗೆ ತಿಳಿಸಿದರೂ ಇದಕ್ಕೆ ಸರ್ವಸದಸ್ಯರು ಸರ್ವಾನುಮತ ಸೂಚಿಸಿದರು.ಮಾಲ್ಕೀ ಹದ್ದಿನಲ್ಲಿರುವ ರಸ್ತೆಗಳನ್ನು ಸಕ್ರಮಗೊಳಿಸಿ: ಲೇಔಟ್ ಮಾಲೀಕರಿಂದ ಕೆಲತಪ್ಪು ನಡೆದಿದ್ದು ಓಡಾಟಕ್ಕೆಂದು ಬಿಟ್ಟಿದ್ದ ರಸ್ತೆ ಜಾಗವನ್ನೂ ಸಹ ಮಾರಾಟ ಮಾಡಿದ್ದಾರೆ. ಹೀಗಾಗಿ ಪ್ರಾಧಿಕಾರದ ಅನುಮತಿ ಮೇರೆಗೆ ಪಟ್ಟಣದಲ್ಲಿರುವ ಮಾಲ್ಕಿ ಹದ್ದಿನಲ್ಲಿರುವ ರಸ್ತೆಗಳನ್ನು ಸರ್ವೇ ನಡೆಸಿದ ಪುರಸಭೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಸಾರ್ವಜನಿಕ ರಸ್ತೆಗಳಾಗಿ ಪರಿವರ್ತಿಸುವಂತೆ ಸದಸ್ಯ ಶಂಕರ ಕುಸಗೂರ ಸಭೆಗೆ ತಿಳಿಸಿದರು.
ಏಕಮುಖ ರಸ್ತೆ ಅರ್ಜಿ ತಿರಸ್ಕಾರ:ಮೆಣಸಿನಕಾಯಿ ವಹಿವಾಟು ನಡೆಸುವ ವೇಳೆ ಆಗುತ್ತಿರುವ ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸ್ ಇಲಾಖೆ ನೀಡಿದ್ದ ಪತ್ರಕ್ಕೆ ಇಂದು ನಡೆದ ಸಭೆಯಲ್ಲಿ ಪುರಸಭೆ ಸದಸ್ಯರು ಯಾವುದೇ ಮಾನ್ಯತೆ ನೀಡಲಿಲ್ಲ, ವಿಷಯದ ಕುರಿತು ಮಾತನಾಡಿದ ಸದಸ್ಯ ಈರಣ್ಣ ಬಣಕಾರ, ಏಕಮುಖ ಸಂಚಾರಕ್ಕೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಸೇರಿದಂತೆ, ವಾಲ್ಮೀಕಿ ಸಂಘ ಹಾಗೂ ಬಸವನಕಟ್ಟೆ ರಸ್ತೆ ಸಾರ್ವಜನಿಕರಿಂದ ತಕರಾರಿದ್ದು, ಅಷ್ಟಕ್ಕೂ ಮುಖ್ಯರಸ್ತೆ ಅಗಲೀಕರಣ ವಿಚಾರ ಭರದಿಂದ ಸಾಗಿದ್ದು ಅಗಲೀಕರಣಕ್ಕೆ ಶೀಘ್ರದಲ್ಲೇ ಹಸಿರುನಿಶಾನೆ ಸಿಗುವ ವಿಶ್ವಾಸವಿದೆ. ಅಲ್ಲಿಯವರೆಗೂ ಎಂದಿನಂತೆ ನಡೆಯಲಿ ಎಂದರು.ವೇದಿಕೆಯಲ್ಲಿ ಉಪಾಧ್ಯಕ್ಷ ಸುಭಾಸ ಮಾಳಗಿ ಸ್ಥಾಯಿಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ ಮುಖ್ಯಾಧಿಕಾರಿ ವಿನಯ ಕುಮಾರ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಕಲಾವತಿ ಬಡಿಗೇರ, ಹನುಮಂತ ಮ್ಯಾಗೇರಿ, ಸರೋಜಾ ಉಳ್ಳಾಗಡ್ಡಿ, ರಾಜಣ್ಣ ಕಳ್ಯಾಳ, ಶಿವರಾಜ ಅಂಗಡಿ, ಮೆಹಬೂಬ್ ಅಗಸನಹಳ್ಳಿ, ಸೋಮಣ್ಣ ಸಂಕಣ್ಣನವರ, ಈರಪ್ಪ ಕರ್ಚಾಡ, ಸುಮಂಗಲಾ ರಾರಾವಿ, ಗಾಯತ್ರಿ ರಾಯ್ಕರ, ಮಹ್ಮದ್ ರಫೀಕ್ ಮುದಗಲ್, ವಿನಯ್ ಹಿರೇಮಠ, ಕವಿತಾ ಸೊಪ್ಪಿನಮಠ, ರೇಷ್ಮಾಬಾನು ಶೇಖ್, ಮಲ್ಲಮ್ಮ ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಪ್ರತ್ಯೇಕ ಪೈಪಲೈನ್: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಜನಸಂಖ್ಯೆ 40 ಸಾವಿರ ತಲುಪುತ್ತಿದೆ. ಬರುವ 2035ನೇ ಇಸ್ವಿಯವರೆಗಿನ ಗುರಿಯೊಂದಿಗೆ 50 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ನೇರವಾಗಿ ತುಂಗಭದ್ರಾ ನದಿಯಿಂದ ಬ್ಯಾಡಗಿ ಪಟ್ಟಣಕ್ಕೆ ಪ್ರತ್ಯೇಕ ಪೈಪಲೈನ್ ಮಾಡಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.