ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮುಖ್ಯ, ಹಣಕ್ಕಾಗಿ ರಾಜಕೀಯಕ್ಕೆ ಬರಬೇಡಿ : ನ್ಯಾ. ಸಂತೋಷ್‌ ಹೆಗ್ಡೆ

KannadaprabhaNewsNetwork |  
Published : Sep 26, 2024, 11:31 AM ISTUpdated : Sep 26, 2024, 12:19 PM IST
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮಾತನಾಡುತ್ತಿರುವುದು | Kannada Prabha

ಸಾರಾಂಶ

ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 45 ವರ್ಷಗಳಲ್ಲಿ ವಿವಿಯ ಕೊಡುಗೆ ಮಹತ್ತರವಾದ್ದು. ಅಂತಹ ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು.  

 ಮಂಗಳೂರು : ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮುಖ್ಯ ಹೌದು, ಆದರೆ ಹಣಕ್ಕಾಗಿ ರಾಜಕೀಯಕ್ಕೆ ಬರಬೇಡಿ, ಯಾವ ಚುನಾವಣೆಗೂ ಸ್ಪರ್ಧಿಸಬೇಡಿ, ಬದಲು ಪ್ರಮಾಣಿಕವಾಗಿ ಜನರ ಸೇವೆ ನಡೆಸುವುದಿದ್ದರೆ ರಾಜಕೀಯಕ್ಕೆ ಬನ್ನಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಬುಧವಾರ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ದಿನಗಳ ರಾಜಕಾರಣಕ್ಕೂ ಈಗಿನ ರಾಜಕೀಯಕ್ಕೂ ಬಹಳ ವ್ಯತ್ಯಾಸ ಇದೆ. ಸ್ವಾತಂತ್ರ್ಯದ 75 ವರ್ಷಗಳ ಬಳಿಕ ಈಗಿನ ರಾಜಕಾರಣ ನೋಡಿ ಬೇಸರವಾಗುತ್ತಿದೆ. ನಾನು ನಿರಾಶಾವಾದಿಯಾಗಿದ್ದೇನೆ. ಹಿಂದೆ ಜನಪ್ರತಿನಿಧಿಗಳಿಗೆ ಚುನಾಯಿತ ಆಡಳಿತದಲ್ಲಿ ಸಭಾ ಭತ್ಯೆ ಎಂಬುದು ಇರುತ್ತಿರಲಿಲ್ಲ. ಈಗ ಅಧಿವೇಶನ ಪೂರ್ತಿ ಹಾಜರಾಗದಿದ್ದಾಗ ಭತ್ಯೆ ಸಿಗದಿದ್ದರೂ ಸಂಬಳ ನಡೆಯುತ್ತಲೇ ಇರುತ್ತದೆ. ಎರಡು ಬಾರಿ ಆಯ್ಕೆಯಾದರೆ ನಿವೃತ್ತಿ ವೇತನದ ಮೊತ್ತವೂ ದುಪ್ಪಟ್ಟಾಗುತ್ತದೆ. ಆಡ‍ಳಿತ-ವಿಪಕ್ಷಗಳ ವಿಚಾರದಲ್ಲಿ ಸಭಾತ್ಯಾಗ ನಡೆದಾಗಲೇ ಪ್ರಮುಖ ಮಸೂದೆಗಳು ಚರ್ಚೆ ಇಲ್ಲದೆಯೇ ಅಂಗೀಕಾರಗೊಳ್ಳುತ್ತವೆ. ಇದು ಜನತೆಗೆ ಯಾವ ಸಂದೇಶ ರವಾನಿಸುತ್ತದೆ ಎಂದು ಜಸ್ಟೀಸ್‌ ಸಂತೋಷ್‌ ಹೆಗ್ಡೆ ಪ್ರಶ್ನಿಸಿದರು.

ನ್ಯಾಯಾಂಗದಲ್ಲೂ ಭ್ರಷ್ಟಾಚಾರ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು. ಆದರೆ ಈಗ ಶಾಸಕರ ನಿಯಂತ್ರಣದಲ್ಲಿ ಕಾರ್ಯಾಂಗ ಕೆಲಸ ಮಾಡಬೇಕಾಗುತ್ತದೆ. ಕೆಳ ಹಂತದ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ ವರೆಗೆ 10-15 ವರ್ಷ ವರೆಗೂ ವ್ಯಾಜ್ಯ ಇತ್ಯರ್ಥಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನ್ಯಾಯದಾನ ವಿಳಂಬವಾಗಬಾರದು. ಅಮೆರಿಕದಂತೆ ಎರಡೇ ಹಂತದಲ್ಲಿ ನ್ಯಾಯ ತೀರ್ಮಾನ ಅಂತಿಮಗೊಳ್ಳಬೇಕು. ಈಗ ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇದ್ದು, ಅಲ್ಲಿಗೆ ನಮ್ಮದೇ ಸಮಾಜದಿಂದ ಹೋಗುವವರು ಸಂವಿಧಾನದ ಆಶಯದಿಂದ ದೂರ ಇರುವುದು ವಿಪರ್ಯಾಸ ಎಂದರು.

ಪ್ರಸಕ್ತ ಶ್ರೀಮಂತಿಕೆ ಹಾಗೂ ಅಧಿಕಾರದ ನಡುವೆ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಹಿಂದೆ ತಪ್ಪು ಮಾಡಿದವರನ್ನು ಸಮಾಜವೇ ಬಹಿಷ್ಕರಿಸುತ್ತಿದ್ದರು. ಈಗ ವ್ಯಕ್ತಿ ಕಾರಣನಲ್ಲ, ಸಮಾಜದ ಮನೋಭಾವ ಬದಲಾಗಿದೆ. ಈಗ ಜೈಲಿಗೆ ಹೋಗಿ ಬಂದರೂ ಅಂಥವರನ್ನು ಮೆರವಣಿಗೆ ಮಾಡಿ ಕರೆತರುವುದು ಕಂಡುಬರುತ್ತಿದೆ. ಇವೆಲ್ಲದಕ್ಕೂ ಮೂಲ ಕಾರಣ ದುರಾಸೆ. ದುರಾಸೆ ಬದಲು ಮಾನವೀಯತೆ, ತೃಪ್ತಿಯ ಸಮಾಜ ನಿರ್ಮಾಣವಾಗದಿದ್ದರೆ ಬಹಳ ಕಷ್ಟವಿದೆ. ಈಗಿನ ಸಮಾಜ, ರಾಜಕೀಯ ಕೆಟ್ಟು ಹೋಗಿದೆ. ಇದನ್ನು ಸರಿಪಡಿಸಬೇಕಾದರೆ ಮಾನವನಲ್ಲಿ ತೃಪ್ತಿ ಎಂಬುದು ಇರಬೇಕು. ಈ ಜೀವನ ಮೌಲ್ಯವನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪರಿವರ್ತನೆ ಮೂಲಕ ಜಾರಿಗೆ ತರಬೇಕು ಎಂದು ಅವರು ಆಶಿಸಿದರು.

ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 45 ವರ್ಷಗಳಲ್ಲಿ ವಿವಿಯ ಕೊಡುಗೆ ಮಹತ್ತರವಾದ್ದು. ಅಂತಹ ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಮುಂದಿನ ಭವಿಷ್ಯಕ್ಕಾಗಿ ಹಕ್ಕನ್ನು ಬದಿಗೆ ಸರಿಸಿ, ಕರ್ತವ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.

ವಿವಿಯ ಕೆಲಸ ಕಾರ್ಯಗಳು ಪಾರದರ್ಶಕವಾಗಿ ಜನತೆಗೆ ಸಿಗುವಂತಾಗಬೇಕು. ಆರ್‌ಟಿಐ ಅರ್ಜಿಗಳು ಕೊನೆಯಾಗಬೇಕು. ನೇಮಕಾತಿಯಲ್ಲೂ ಪಾರದರ್ಶನಕತೆ ಕಾಯ್ದುಕೊಳ್ಳಬೇಕಾಗಿದೆ. ದುಂದುವೆಚ್ಚಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ. ವಿವಿಯನ್ನು ಸಮಾಜಮುಖಿಯಾಗಿ ರೂಪಿಸಲು ಚಿಂತಿಸಲಾಗುತ್ತಿದೆ ಎಂದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಎ.ಎಂ.ಖಾನ್‌ ವಂದಿಸಿದರು. ಶ್ರೀದೇವಿ ನಿರೂಪಿಸಿದರು. ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಕ್ರಾಂತಿ ಉಂಟಾಗಿ ದೇಶ ತುಂಡಾಗುವ ಭೀತಿ ಇದೆ. ಆಗ ನ್ಯಾಯತೀರ್ಮಾನಕ್ಕೆ ಸುಪ್ರೀಂ ಕೋರ್ಟ್‌ ಕೂಡ ಇಲ್ಲದ ಪರಿಸ್ಥಿತಿ ತಲೆದೋರಬಹುದು. ದೇಶ ರಣಾಂಗಣವಾಗಲಿದೆ. ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಈಗಿಂದಲೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯತೆ ಇದೆ.

-ಜಸ್ಟೀಸ್‌ ಸಂತೋಷ್‌ ಹೆಗ್ಡೆ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಹೊರೆಯಾದ ಕೋಳಿ ಮೊಟ್ಟೆ ಯೋಜನೆ
40 ವರ್ಷಗಳ ನಂತರ ಗುರು-ಶಿಷ್ಯರ ಸಮಾಗಮ