ವಾರದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಬೇಯಿಸಿದ ಮೊಟ್ಟೆ ವಿತರಣೆ

KannadaprabhaNewsNetwork | Published : Sep 26, 2024 11:31 AM

ಸಾರಾಂಶ

ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದೆ ಬಂದಿರುವ ಅಜೀಮ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರ ಆಡಳಿತ ಅವಧಿಯಲ್ಲಿ ಬಿಸಿಯುಟದ ಯೋಜನೆ ಜಾರಿಗೆ ತರಲಾಗಿತ್ತು. ಇದರ ಜೊತೆಗೆ ವಾರದಲ್ಲಿ ಎರಡು ದಿನ ಬೇಯಿಸಿದ ಮೊಟ್ಟೆ ಉಳಿದ ದಿನಗಳಲ್ಲಿ ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ವಿತರಿಸಲಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಬೇಯಿಸಿದ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.

ತಾಲೂಕಿನ ಚಾಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಅಕ್ಷರ ದಾಸೋಹ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಿಸಿಊಟದ ಜೊತೆಗೆ ಬೇಯಿಸಿದ ಮೊಟ್ಟೆ ವಿತರಿಸಿದ ಶಾಸಕ ಉದಯ್ ಮಾತನಾಡಿ, ತಾಲೂಕಿನ 254 ಸರ್ಕಾರಿ ಶಾಲೆಗಳ ಹಾಗೂ 24 ಅನುದಾನಿತ ಶಾಲೆಗಳ 14096 ಮಕ್ಕಳು ವಾರದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮೊಟ್ಟೆ ಭಾಗ್ಯ ಯೋಜನೆ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.

ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದೆ ಬಂದಿರುವ ಅಜೀಮ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರ ಆಡಳಿತ ಅವಧಿಯಲ್ಲಿ ಬಿಸಿಯುಟದ ಯೋಜನೆ ಜಾರಿಗೆ ತರಲಾಗಿತ್ತು. ಇದರ ಜೊತೆಗೆ ವಾರದಲ್ಲಿ ಎರಡು ದಿನ ಬೇಯಿಸಿದ ಮೊಟ್ಟೆ ಉಳಿದ ದಿನಗಳಲ್ಲಿ ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ವಿತರಿಸಲಾಗುತ್ತಿತ್ತು ಎಂದರು.

ಇನ್ನು ಮುಂದೆ ವಾರದಲ್ಲಿ ನಾಲ್ಕು ದಿನಗಳ ಕಾಲ ಮೊಟ್ಟೆ ನೀಡುವ ಯೋಜನೆ ಜಾರಿಗೆ ಬಂದಿದೆ. ಶಾಲೆಗಳ ಶಿಕ್ಷಕರು ಮತ್ತು ಬಿಸಿಯುಟದ ಸಿಬ್ಬಂದಿ ಮೊಟ್ಟೆ ವಿತರಣೆಯಲ್ಲಿ ಯಾವುದೇ ದೂರುಗಳಿಗೆ ಅವಕಾಶ ಆಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಶಿಕ್ಷಣ ಇಲಾಖೆಯ ಪ್ರಭಾರ ಸಮನ್ವಯಾಧಿಕಾರಿ ಮಹದೇವ ಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಸಿಆರ್ ಪಿ ಶೋಭಾ, ಗ್ರಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಷ್ಪ, ಸದಸ್ಯರಾದ ಜಗದೀಶ್, ಎಸ್.ಎಂ.ಗೌಡ, ಅನಂತಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಹಾಸ್, ಉಪಾಧ್ಯಕ್ಷ ಗಾಯಿತ್ರಿ, ಮುಖ್ಯ ಶಿಕ್ಷಕಿ ಸುಧಾಮಣಿ ಮತ್ತಿತರರು ಪಾಲ್ಗೊಂಡಿದ್ದರು.

Share this article