ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಾಜಪೇಯಿ ಅವರ 101ನೇ ಜನ್ಮದಿನ ಅಂಗವಾಗಿ ಗುರುವಾರ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಾಜಪೇಯಿ ಕುರಿತಾದ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಪೋಖ್ರಾನ್ ಅಣು ಪರೀಕ್ಷೆ ದೇಶಕ್ಕೆ ಹೆಮ್ಮೆ. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಕಾರಣ. ವಾಜಪೇಯಿ ಅವರು ಇವತ್ತಿಗೂ ನಮ್ಮ ಮನಸ್ಸಿನಲ್ಲಿ ಇದ್ದಾರೆ. ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು ಕೊಡುವಂಥ ಕೆಲಸ ಮಾಡಿದ್ದಾರೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಟಲ್‌ ಹೆಸರಿನ ಉಚ್ಚಾರಣೆಯೇ ನಮಗೆ ರೋಮಾಂಚನ ಉಂಟು ಮಾಡುತ್ತದೆ. ಆ ಹೆಸರು ಪ್ರೇರಣೆ, ಉತ್ಸಾಹ ತುಂಬುತ್ತದೆ. ಅಂಥ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದು ತಿಳಿಸಿದರು.

ವಾಜಪೇಯಿ ಅವರು ಹಲವಾರು ಬಾರಿ ಅವರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇಗೌಡ, ಜಗದೀಶ ಶೆಟ್ಟರ್ ಮತ್ತಿತರ ಪಕ್ಷದ ಹಿರಿಯರಿಗೆ ಪ್ರೇರಣೆ ನೀಡಿದ ಮಹಾನ್ ನಾಯಕ ಅವರು ಎಂದು ಅಭಿಪ್ರಾಯಪಟ್ಟರು.ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ವಾಜಪೇಯಿ ಅವರದು ನಿಷ್ಕಳಂಕ ನಾಯಕತ್ವ. ಅದರ ಮೂಲಕ ಅವರು ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.