ಚಿತ್ರದುರ್ಗ ಬಸ್‌-ಲಾರಿ ಅಪಘಾತದಲ್ಲಿ ಗಾಯಗೊಂಡ 11 ಮಂದಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಮಂಜುನಾಥ್‌ ಅವರಿಗೆ ಗಂಭೀರ ಸುಟ್ಟಗಾಯಗಳಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗ ಬಸ್‌-ಲಾರಿ ಅಪಘಾತದಲ್ಲಿ ಗಾಯಗೊಂಡ 11 ಮಂದಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಮಂಜುನಾಥ್‌ ಅವರಿಗೆ ಗಂಭೀರ ಸುಟ್ಟಗಾಯಗಳಾಗಿವೆ.

ಮಂಜುನಾಥ್‌ ಅವರಿಗೆ ಹೆಚ್ಚು ಸುಟ್ಟು ಗಾಯಗಳಾಗಿದ್ದು, ದಟ್ಟ ಹೊಗೆ ಹಾಗೂ ಬೆಂಕಿಯಿಂದ ಶ್ವಾಸಕೋಶಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.ಉಳಿದಂತೆ ಕೀರ್ತನ್‌, ದೇವಿಕಾ ಮತ್ತು ಕಿರಣ್‌ ಪಾಲ್‌ ಎಂಬುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಅಪಘಾತದಲ್ಲಿ ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು, ವಿಶೇಷವಾಗಿ ಸೊಂಟದ ಕೆಳಭಾಗ ಹಾಗೂ ಎಡ ಕಾಲಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ 24 ಗಂಟೆಗಳ ಕಾಲ ತೀವ್ರ ನಿಗಾ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೂ ಅಪಘಾತದಲ್ಲಿ ಶಶಾಂಕ್ ಹಾಗೂ ಸಂಧ್ಯಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರೂ ವಿಠಲ್ ಮಲ್ಯ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಉಳಿದವರು ಅಪೊಲೋ ಹಾಗೂ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಹೊರಗೆ ಹಾರಿ ಜೀವ ಉಳಿಸಿಕೊಂಡೆವು: ಕಿರಣ್‌ ಪಾಲ್‌

ರಾತ್ರಿ 2-3 ಗಂಟೆ ವೇಳೆಯಲ್ಲಿ ಟ್ರಕ್‌ ಢಿಕ್ಕಿಯಾಗಿ ಅಪಘಾತ ಆಗಿದ್ದು, ಬಸ್ಸಿನಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರಣ್‌ ಪಾಲ್‌ ಹೇಳಿದ್ದಾರೆ. ನಿದ್ರೆಯಲ್ಲಿದ್ದಾಗ ಏಕಾಏಕಿ ಹಿಂಬದಿಯಿಂದ ಬಂದ ಟ್ರಕ್‌ ಢಿಕ್ಕಿಯಾಗಿದೆ. ಹಿಂದಿನಿಂದ ಬೆಂಕಿ ಹೊತ್ತಿಕೊಂಡಿತ್ತು. ನನಗೆ ಏನಾಗಿದೆ ಎಂಬುದೂ ಸಹ ಗೊತ್ತಾಗಲಿಲ್ಲ. ನಿದ್ದೆಯಿಂದ ಎದ್ದವನೇ ಆಗಾಗಲೇ ಗಾಜು ಹೊಡೆದಿದ್ದ ಕಿಟಕಿಯಿಂದ ಹೊರಗೆ ಜಿಗಿದೆ. ಹೀಗಾಗಿ ಸಣ್ಣ ಪುಟ್ಟ ಗಾಯಗಳಾಗಿ ಪಾರಾಗಿದ್ದೇನೆ ಎಂದು ಹೇಳಿದರು.

ಬೆಂಕಿ ಕಂಡ ಕೂಡಲೇ

ಜಿಗಿದೆವು: ದಂಪತಿ

ಬಸ್ಸಿನಲ್ಲಿದ್ದ ಉತ್ತರ ಭಾರತ ಮೂಲದ ಹೇಮರಾಜ್‌ ಹಾಗೂ ಕಲ್ಪನಾ ದಂಪತಿಯು 8 ವರ್ಷದ ಮಗುವಿನೊಂದಿಗೆ ಪವಾಡದ ರೀತಿಯಲ್ಲಿ ಪಾರಾಗಿದ್ದಾರೆ. ಹೇಮರಾಜ್‌ಗೆ ತಲೆಗೆ ಗಾಯವಾಗಿದ್ದು, ಕಲ್ಪನಾ ಅವರಿಗೆ ಸೊಂಟಕ್ಕೆ ಪೆಟ್ಟಾಗಿದೆ. ಇಬ್ಬರೂ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮರಾಜ್‌, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳಬೇಕಾಗಿತ್ತು. ಮಲಗಿದ್ದಾಗ ಸುಮಾರು 2 ಗಂಟೆ ವೇಳೆಯಲ್ಲಿ ಲಾರಿ ಢಿಕ್ಕಿ ಹೊಡೆದು ಹಿಂಬದಿಯಿಂದ ಬೆಂಕಿ ಹೊತ್ತಿಕೊಂಡಿತು.

ತಕ್ಷಣ ನಾನು ಎದ್ದು ನೋಡಿದಾಗ ಹಿಂದಿನಿಂದ ಬೆಂಕಿ ಆವರಿಸುತ್ತಿತ್ತು. ಮಂಜು ಹಾಗೂ ಹೊಗೆಯಿಂದ ಮುಂಭಾಗದಲ್ಲೂ ಏನೂ ಕಾಣುತ್ತಿರಲಿಲ್ಲ. ಢಿಕ್ಕಿಯ ರಭಸಕ್ಕೆ ಕಿಟಕಿ ಗಾಜು ಹೊಡೆದಿತ್ತು. ಹೀಗಾಗಿ ಮೊದಲಿಗೆ ನನ್ನ ಮಗನನ್ನು ಕೆಳಗೆ ಇಳಿಸಿದೆ. ಬಳಿಕ ನನ್ನ ಪತ್ನಿಯನ್ನು ಕೆಳಗೆ ಇಳಿಸಿ ಬಳಿಕ ನಾನು ಜಿಗಿದೆ. ಈ ವೇಳೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ವೇಳೆ ಬಹುತೇಕ ಲಾರಿ ಹಾಗೂ ಬಸ್ಸು ಬೆಂಕಿಯಲ್ಲಿ ಉರಿಯುತ್ತಿತ್ತು ಎಂದು ಹೇಳಿದರು.