ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಅನಾರೋಗ್ಯದ ಕಥೆ ಕಟ್ಟಿ ಅಕ್ಕಪಕ್ಕದವರನ್ನು ಸಹಾಯ ಮಾಡುವಂತೆ ಕೇಳಿದ ಮಹಿಳೆಯೊಬ್ಬಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಅನಾರೋಗ್ಯದ ಕಥೆ ಕಟ್ಟಿ ಅಕ್ಕಪಕ್ಕದವರನ್ನು ಸಹಾಯ ಮಾಡುವಂತೆ ಕೇಳಿದ ಮಹಿಳೆಯೊಬ್ಬಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುರಬರಹಳ್ಳಿ ನಿವಾಸಿ ರಾಜೀವ್ ರಜಪೂತ್ (29) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ರೂಬಿನಾ ರಜಪೂತ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಬುಧವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೊನೆಗೆ ಸತಿ-ಪತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಎಂಟು ವರ್ಷಗಳ ಹಿಂದೆ ಅಸ್ಸಾಂ ಮೂಲದ ರಾಜೀವ್ ಹಾಗೂ ರೂಬಿನಾ ವಿವಾಹವಾಗಿದ್ದು, ಈ ದಂಪತಿಗೆ ಮೂರು ವರ್ಷ ಮಗುವಿದೆ. ಕೆಲಸ ಅರಸಿಕೊಂಡು ವಿವಿಧ ರಾಜ್ಯಗಳಲ್ಲಿ ಗುಳೆ ಹೋಗುತ್ತಿದ್ದ ಈ ದಂಪತಿ, 20 ದಿನಗಳ ಹಿಂದಷ್ಟೇ ನಗರಕ್ಕೆ ಬಂದಿತ್ತು. ಬಳಿಕ ವರ್ತೂರು ಸಮೀಪದ ತುರಬರಹಳ್ಳಿಯಲ್ಲಿ ಅವರು ನೆಲೆಸಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಕೌಟುಂಬಿಕ ವಿಷಯಗಳಿಗೆ ಸತಿ-ಪತಿ ಗಲಾಟೆ ಮಾಡುತ್ತಿದ್ದರು. ಈ ಗಲಾಟೆ ಸಹಿಸಲಾರದೆ ದಂಪತಿ ಮೇಲೆ ಸ್ಥಳೀಯರು ತಿರುಗಿ ಬಿದ್ದಿದ್ದರು.

ಅಂತೆಯೇ ಬುಧವಾರ ರಾತ್ರಿ ಸಹ ರಾಜೀವ್ ಹಾಗೂ ರೂಬಿನ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಬಿಗಾಡಯಿಸಿದೆ. ಈ ಹಂತದಲ್ಲಿ ಕೋಪಗೊಂಡು ಪತಿಗೆ ರೂಬಿನಾ ಚಾಕುವಿನಿಂದ ಇರಿದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ.

ನೆರೆ ಮನೆಯ ಬಾಗಿಲು ಬಡಿದು ಸಹಾಯ ಕೇಳಿದಳು:

ಈ ಹತ್ಯೆ ಬಳಿಕ ಗುರುವಾರ ನಸುಕಿನಲ್ಲಿ ನೆರೆಹೊರೆಯವರ ಬಾಗಿಲು ಬಡಿದು ರೂಬಿನಾ ನೆರವು ಕೋರಿದ್ದಾಳೆ. ತನ್ನ ಪತಿಗೆ ಆರೋಗ್ಯದಲ್ಲಿ ತೊಂದರೆಯಾಗಿದೆ. ಮಾತನಾಡದೆ ಪ್ರಜ್ಞಾಹೀನನಾಗಿದ್ದಾನೆ ಎಂದಿದ್ದಳು. ತಕ್ಷಣವೇ ಮೃತರ ಮನೆಗೆ ಅಕ್ಕಪಕ್ಕದ ಮನೆಯವರು ಬಂದಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜೀವ್‌ನನ್ನು ಕಂಡು ಆತಂಕಗೊಂಡ ಸ್ಥಳೀಯರು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ವೇಳೆ ಚಾಕುವಿನಿಂದ ಇರಿದಿರುವುದು ಖಚಿತವಾಗಿದೆ.

ಈ ಮಾಹಿತಿ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.