ಇತ್ತೀಚೆಗೆ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದ ಆರೋಪಿ ಪತಿಯು, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ₹80 ಸಾವಿರ ಕೊಟ್ಟು ಬಿಹಾರದಿಂದ ಖರೀದಿ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದ ಆರೋಪಿ ಪತಿಯು, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ₹80 ಸಾವಿರ ಕೊಟ್ಟು ಬಿಹಾರದಿಂದ ಖರೀದಿ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.ಮಂಗಳವಾರ ಸಂಜೆ, ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭುವನೇಶ್ವರಿ (39) ಅವರ ಮೇಲೆ 5 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದ ಆರೋಪಿ ಪತಿ ಬಾಲಮುರುಗನ್ (40) ನಂತರ ನೇರವಾಗಿ ಠಾಣೆಗೆ ಬಂದು ಶರಣಾಗಿದ್ದ. ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರಿಗೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.
ಆರೋಪಿಯು ತನ್ನ ಪತ್ನಿಯನ್ನು ಕೊಲ್ಲುವ ಉದ್ದೇಶದಿಂದ ಕಳೆದ ಜುಲೈನಲ್ಲಿ ರೈಲಿನಲ್ಲಿ ಬಿಹಾರಕ್ಕೆ ಪ್ರಯಾಣಿಸಿ ಅಲ್ಲಿ ಕೆಲಕಾಲ ತಂಗಿದ್ದ. ನಂತರ 80 ಸಾವಿರ ಕೊಟ್ಟು ಪಿಸ್ತೂಲ್ ಮತ್ತು ಎರಡು ಮ್ಯಾಗಜಿನ್ (10 ಗುಂಡುಗಳು) ಖರೀದಿಸಿದ್ದ. ನಂತರ ಪಿಸ್ತೂಲ್ ಯಾವ ರೀತಿ ಬಳಸಬೇಕು ಎಂಬುದರ ಬಗ್ಗೆ ಒಂದೆರಡು ದಿನ ದುಷ್ಕರ್ಮಿಗಳಿಂದ ತರಬೇತಿಯನ್ನು ಪಡೆದುಕೊಂಡು ಬಂದಿದ್ದ. ಬಂದೂಕಿನೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದರೆ ಸಿಕ್ಕಿ ಬೀಳುವ ಭಯದಿಂದ ಆರೋಪಿಯು ರೈಲಿನಲ್ಲಿಯೇ ಪ್ರಯಾಣ ಬೆಳೆಸಿ ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ತಂದಿದ್ದ ಎಂದು ಮೂಲಗಳು ತಿಳಿಸಿವೆ.ಇಷ್ಟೇ ಅಲ್ಲದೇ ಆರೋಪಿಯು ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಪತ್ನಿಯನ್ನು ಯಾವ ರೀತಿ ಕೊಲ್ಲಬೇಕು ಎಂದು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ದ. ಹಲವು ವಿಡಿಯೋಗಳನ್ನು ನೋಡಿದ್ದ. ಹತ್ಯೆಯ ವಿವಿಧ ವಿಧಾನಗಳನ್ನು ಅಧ್ಯಯನ ಮಾಡಿದ್ದ. ಜತೆಗೆ ಅಕ್ರಮ ಪಿಸ್ತೂಲ್‌ಗಳು ಎಲ್ಲಿ ಸಿಗುತ್ತದೆ ಎಂದು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದ. ನಂತರ ಆ ಮಾಹಿತಿ ಆಧರಿಸಿ ಬಿಹಾರಕ್ಕೆ ಹೋಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಖರೀದಿಕೊಂಡು ಬಂದಿದ್ದ. ಆರೋಪಿಗೆ ಪಿಸ್ತೂಲು ಮತ್ತು ಗುಂಡುಗಳನ್ನು ಮಾರಾಟ ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಒಂದು ವಿಶೇಷ ತಂಡ ಬಿಹಾರಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.
