ಕನ್ನಡಪ್ರಭ ವಾರ್ತೆ ಮಂಗಳೂರು
ಕೃತಕ ಬುದ್ಧಿಮತ್ತೆ (ಎಐ)ಯ ಸಾಮಾಜಿಕ ಪರಿಣಾಮ ತುಸು ಋಣಾತ್ಮಕವಾದುದು. ಎಐ ತಂತ್ರಜ್ಞಾನವು ಇಡೀ ಪ್ರಪಂಚವನ್ನು ಜೋಡಿಸುವಂತೆ ಕಂಡುಬಂದರೂ, ಅದು ಜನರ ನಡುವಿನ ಸಂಪರ್ಕ ಕಡಿತಗೊಳಿಸಿ ನಮ್ಮನ್ನು ಒಂಟಿತನಕ್ಕೆ ದೂಡಲಿದೆ. ಎಐ ಪ್ರಾಬಲ್ಯದ ನಡುವೆ ಮಾನವೀಯ ಸಂಬಂಧಗಳನ್ನು ಪಾಲಿಸುವುದು, ನೇರ ಕುಟುಂಬ ಸಂಪರ್ಕಗಳನ್ನು ಉಳಿಸಿಕೊಳ್ಳುವುದು ಹಾಗೂ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಸಲಹೆ ನೀಡಿದ್ದಾರೆ.ಕರ್ನಾಟಕದ ಏಕೈಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾಗಿರುವ ಸುರತ್ಕಲ್ ಎನ್‌ಐಟಿಕೆಯ 22ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ಮನುಷ್ಯರನ್ನು ಪ್ರತ್ಯೇಕಿಸುವ ಗುಣ ಹೊಂದಿದೆ. ಮಾನವರ ನಡುವೆ ನೇರ ಸಾಮಾಜಿಕ ಸಂಪರ್ಕ ಹೊಂದದಿದ್ದರೆ ನಾವೂ ಯಂತ್ರಗಳಾಗಿಬಿಡುವ ಅಪಾಯವಿದೆ. ಎಐ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವ ಜಗತ್ತಿನಲ್ಲಿ ಬದುಕಲು ಮಾನವ ಸಂಬಂಧ, ಸೃಜನಶೀಲತೆ, ಚಿಂತನೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಎಐನಿಂದ ಸತ್ಯದ ಪರಿಕಲ್ಪನೆ ಬದಲು: ಕೃತಕ ಬುದ್ಧಿಮತ್ತೆಯು ಸತ್ಯದ ಪರಿಕಲ್ಪನೆಯನ್ನೇ ನಾಶಪಡಿಸುವ ಸಾಮರ್ಥ್ಯ ಹೊಂದಿವೆ. ಎಐ ಆಧಾರಿತ ಡೀಪ್‌ಫೇಕ್ ವಿಡಿಯೊಗಳು, ಎಐ ಫ್ಯಾಬ್ರಿಕೇಟೆಡ್ ಚಿತ್ರಗಳು ಶುರುವಾಗಿ ಏನನ್ನು ನಂಬಬೇಕೆಂದು ತಿಳಿಯದ ಪರಿಸ್ಥಿತಿ ಉದ್ಭವಿಸುತ್ತಿದೆ. ಹೀಗಾಗಿ ನಾವು ಸ್ವಂತ ಕಣ್ಣಿನಿಂದ ಏನನ್ನು ನೋಡುತ್ತೇವೋ ಅದನ್ನು ಮಾತ್ರ ನಂಬುವ ಪರಿಸ್ಥಿತಿ ಬರಬಹುದು ಎಂದು ಪ್ರೊ.ರಂಗರಾಜನ್ ಎಚ್ಚರಿಸಿದರು.ಉದ್ಯೋಗ ಕಸಿಯಲಿರುವ ಎಐ: ಎಐ ತಂತ್ರಜ್ಞಾನವು ಕೋಡಿಂಗ್ ಮತ್ತು ಚಿಪ್ ವಿನ್ಯಾಸವನ್ನು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಮಾಡುವುದರಿಂದ ಈ ಕ್ಷೇತ್ರದ ಪ್ರವೇಶ ಹಂತದ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ. ಇದನ್ನು ಮೀರಿ ನಿಲ್ಲಬೇಕಾದರೆ ಕೃತಕ ಬುದ್ಧಿಮತ್ತೆಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುವ ಕೌಶಲ್ಯ ವೃದ್ಧಿ ಮಾಡಬೇಕಿದೆ ಎಂದು ಪದವೀಧರರಿಗೆ ತಿಳಿಸಿದರು.ಸಾಮಾಜಿಕ, ಪರಿಸರ ಕಾಳಜಿ ಇರಲಿ: ಸಿಕಂದರಾಬಾದ್‌ನ ಕಿಮ್ಸ್ ಫೌಂಡೇಶನ್ ಮತ್ತು ರಿಸರ್ಚ್ ಸೆಂಟರ್ ಅಧ್ಯಕ್ಷ ಡಾ. ಭುಜಂಗ ರಾವ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಪೂರಕವಾಗಿ ಹೊಸತನ ಮತ್ತು ಬದಲಾವಣೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಮತ್ತು ಸೆನೆಟ್ ಸದಸ್ಯರು, ಡೀನ್‌ಗಳು, ವಿಭಾಗ ಮುಖ್ಯಸ್ಥರು ಇದ್ದರು.2000ಕ್ಕೂ ಅಧಿಕ ಪದವಿ ಪ್ರದಾನ
ಈ ಬಾರಿ ಬೆಳಗ್ಗಿನ ಅವಧಿಯಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ನೆರವೇರಿಸಿದರೆ, ಮಧ್ಯಾಹ್ನ ಬಳಿಕ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅತಿಥಿಗಳು ಗಣ್ಯರು ಶಾಲು ಧರಿಸಿ ವೇದ ಘೋಷದೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದರು. 1002 ಬಿಟೆಕ್, 758 ಎಂಟೆಕ್, 179 ಇತರ ಸ್ನಾತಕೋತ್ತರ ಪದವಿಗಳು (ಎಂಬಿಎ, ಎಂಸಿಎ, ಎಂಎಸ್ಸಿ), 139 ಪಿಎಚ್‌ಡಿ ಸೇರಿದಂತೆ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.