ಕನ್ನಡಪ್ರಭ ವಾರ್ತೆ ಹಾಸನ
ಸಮಾಜಕ್ಕೆ ಗುರುಗಳ ಕೊಡುಗೆಯ ಮಹತ್ವವನ್ನು ಅರಿತುಕೊಂಡರೆ ಅಂತಹ ವ್ಯಕ್ತಿಯ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹಳೇಬೀಡು ಪುಷ್ಪಗಿರಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಗರದ ಶ್ರೀ ಕ್ಷೇತ್ರ ತಣ್ಣೀರು ಹಳ್ಳದ ಮಠದ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸಾನ್ನಿಧ್ಯವಹಿಸಿ ಗುರುಗಳಿಂದ ಸಮಾಜಕ್ಕೆ ಕೊಡುಗೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಗುರುಗಳ ಸೇವೆ, ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಅವರು ಗುರುಗಳ ಕೊಡುಗೆ ಸದಾ ಅಮೂಲ್ಯವಾಗಿದ್ದು, ಸಮಾಜದ ನವೀನ ಪೀಳಿಗೆಯನ್ನು ರೂಪಿಸುವ ಶಕ್ತಿ ಗುರುಗಳಲ್ಲಿ ಅಡಕವಾಗಿದೆ ಎಂದು ನೆನಪಿಸಿದರು. ಮಹಾಸಭಾ ವತಿಯಿಂದ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳ ಬಗ್ಗೆ ಮತ್ತು ಎಲ್ಲರೂ ಆಸಕ್ತಿಯಿಂದ ವಿನೂತನ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದರ ಬಗ್ಗೆ ಪ್ರಶಂಸೆಯನ್ನು ಸಹ ವ್ಯಕ್ತಪಡಿಸಿದರು. ೨೦೨೫ ಸೆಪ್ಟಂಬರ್ 21ರ ಭಾನುವಾರ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಜಿಲ್ಲೆಯಲ್ಲಿ ವಿಶೇಷವಾಗಿ ವಿನೂತನವಾಗಿ ಆಚರಿಸುವುದರ ಬಗ್ಗೆ ಜಿಲ್ಲೆಯ ಸಮಸ್ತ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆಯನ್ನು ಸಹ ನೀಡಿದರು ಮತ್ತು ಎಲ್ಲರಿಗೂ ಆಶೀರ್ವಚನ ನೀಡಿದರು.ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯ ಶಿಕ್ಷಕರನ್ನು ಮಹಾಸಭೆಯ ವತಿಯಿಂದ ಗೌರವಿಸಲಾಯಿತು. ಜಯಶೀಲಮ್ಮ (ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ, ಹಳೇಕೋಟೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರು), ರಾಣಿ ವಿ.ಎಸ್. (ಭಾರತ ಸೇವಾದಳದ ವಲಯ ಸಂಘಟಕಿ), ಬಸವರಾಜ್ ಯು.ಎಸ್. (ನಿವೃತ್ತ ಶಿಕ್ಷಕ), ಸೋಮಶೇಖರ್ (ಯುನೈಟೆಡ್ ಶಾಲೆ) ಮಲ್ಲಿಕಾರ್ಜುನ್ (ತಣ್ಣೀರುಳ್ಳ ಮಠದ ಸಿದ್ದೇಶ್ವರ ಶಾಲೆಯ ಮುಖ್ಯ ಶಿಕ್ಷಕ), ರಾಧಿಕಾ, ಗೌರಿ, ಅನುಸೂಯಾ (ತಾಲೂಕು ಘಟಕದ ಸದಸ್ಯರು) ಇವರನ್ನು ಸನ್ಮಾನಿಸಿ ಗೌರವಿಸಿದರು.ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕ, ಮಹಿಳಾ ಘಟಕ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಹಿರಿಯ ಸದಸ್ಯರು ಭಾಗವಹಿಸಿದರು. ತಾಲೂಕು ಘಟಕದ ಮಹಿಳಾ ಸದಸ್ಯರು ಪ್ರಾರ್ಥನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ವಾಗತವನ್ನು ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಮತಿ ನಡೆಸಿಕೊಟ್ಟರು. ಜಿಲ್ಲಾ ಘಟಕದ ಅಧ್ಯಕ್ಷರಾದ ನವಿಲೇ ಪರಮೇಶ್ ಅವರು ಪ್ರಸ್ತಾವನೆಯನ್ನು ಮಂಡಿಸಿ, ಅಧ್ಯಕ್ಷರ ನುಡಿಯನ್ನು ಸಹ ನೀಡಿದರು.
ಅಖಿಲ ಭಾರತ ವೀರಶೈವ ಜಿಲ್ಲಾ ಘಟಕದ ಅಧ್ಯಕ್ಷರಾದ ನವಿಲೇ ಪರಮೇಶ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಮತಿ ಅವರು ಶಿಕ್ಷಕರಿಗೆ ಗೌರವ ಸಲ್ಲಿಸಿ ಅಭಿನಂದಿಸಿದರು. ತಾಲೂಕು ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ್ ಅವರು ಕೇಕ್ ಕತ್ತರಿಸಿ ಸಿಹಿ ವಿತರಣೆ ಮಾಡಿದರು.