ಕೊಪ್ಪಳ:
ತಾಲೂಕಿನ ಮುದ್ದಾಬಳ್ಳಿ-ಗೊಂಡಬಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಅವಕಾಶ (ಎನ್‌ಒಸಿ) ನೀಡದಂತೆ ಗ್ರಾಮ ಪಂಚಾಯಿತಿಯಲ್ಲಿ ಗೊತ್ತುವಳಿ ಅಂಗೀಕಾರ ಮಾಡುವಂತೆ ಆಗ್ರಹಿಸಿ ಮುದ್ದಾಬಳ್ಳಿ ಮುಖಂಡರು ಶುಕ್ರವಾರ ಗೊಂಡಬಾಳ ಗ್ರಾಪಂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.ಮುದ್ದಾಬಳ್ಳಿ ಹಾಗೂ ಗೊಂಡಬಾಳ ಮಧ್ಯೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ೨೦೨೩ರಲ್ಲಿ ಪರಿಸರ ಇಲಾಖೆಯಿಂದ ನಡೆಸಿದ ಅಹವಾಲು ಸಭೆಯಲ್ಲಿ ನಾವು ಯಾವುದೇ ಕಾರಣಕ್ಕೂ ಕಾರ್ಖಾನೆ ಬೇಡ ಎಂದು ಒತ್ತಾಯಿಸಿದ್ದೇವೆ. ಆದರೂ ಸಹ ಸರ್ಕಾರವು ಮೆ. ಯುಕೆಇಎಮ್ ಅಗ್ರಿ ಇನ್ಫ್ರಾ ಲಿಮಿಟೆಡ್ ಕಂಪನಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಈಗ ಕಂಪನಿ ಗ್ರಾಪಂಗೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಗ್ರಾಪಂನಿಂದ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ನೀಡಿದೆ. ಆದರೆ, ಈ ಕಾರ್ಖಾನೆ ಸ್ಥಳವು ಗ್ರಾಮದಿಂದ ಕೇವಲ ೫೦ರಿಂದ ೬೦೦ ಮೀಟರ್ ದೂರದಲ್ಲಿದೆ. ಇದರಿಂದ ಫಲವತ್ತಾದ ಭೂಮಿ, ಏತ ನೀರಾವರಿ ಸೌಲಭ್ಯ ಮತ್ತು ಉತ್ತಮ ಪರಿಸರವೂ ಹಾಳಾಗಲಿದೆ. ಉದ್ದೇಶಿತ ಜಾಗದ ಸಮೀಪದಲ್ಲಿಯೇ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದೆ. ಜತೆಗೆ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರವು ಅನುಮೋದನೆ ನೀಡಿದೆ. ಇದರಿಂದ ಮುಂದೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಮುಖಂಡರು ಮನವರಿಕೆ ಮಾಡಿದ್ದಾರೆ.
ಕಾರ್ಖಾನೆ ಸ್ಥಾಪನೆಯಾದರೆ ಸ್ಥಳೀಯ ಜಲಸಂಪತ್ತುಗಳಾದ ತುಂಗಭದ್ರಾ ನದಿ, ಕೊಳವೆ ಬಾವಿಗಳು ಮಲಿನ್ಯವಾಗಲಿವೆ. ಈ ಕಾರ್ಖಾನೆಯು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಿಂದ ೨೦೦ ಮೀಟರ್ ಅಂತರದಲ್ಲಿದೆ. ಜನರ ರೋಗ-ರುಜಿನಕ್ಕೂ ದಾರಿಯಾಗಲಿದೆ. ಕೂಡಲೇ ಈ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಕಾರ್ಖಾನೆಗೆ ಎನ್‌ಒಸಿ ಯಾವುದೇ ಕಾರಣಕ್ಕೂ ನೀಡಬಾರದು. ಅದಕ್ಕೂ ಮೊದಲು ಮುದ್ದಾಬಳ್ಳಿಯಲ್ಲಿ ಗ್ರಾಮಸಭೆ ನಡೆಸಬೇಕು. ಜನಾಭಿಪ್ರಾಯ ಪಡೆಯಬೇಕು. ಇಲ್ಲಿ ಸಾರ್ವಜನಿಕರ ಹಿತವೇ ಮುಖ್ಯವಾಗಿದ್ದು ತಕ್ಷಣ ಗ್ರಾಪಂ ಜನರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿತಲ್ಲದೇ, ಕಾರ್ಖಾನೆ ಸ್ಥಾಪನೆಗೆ ಆಕ್ಷೇಪಣೆ ಹಾಗೂ ತಕರಾರು ಅರ್ಜಿಯನ್ನು ಪ್ರತ್ಯೇಕವಾಗಿಯೇ ಸಲ್ಲಿಸಲಾಯಿತು.
ಈ ವೇಳೆ ಮುಖಂಡರಾದ ಮಲ್ಲಿಕಾರ್ಜುನಗೌಡ್ರ ಪಾಟೀಲ್, ಶರಣಗೌಡ್ರ ಪಾಟೀಲ್, ಸಂಗಣ್ಣ ನಾಗರಳ್ಳಿ, ಸುರೇಶರಡ್ಡಿ ಮಾದಿನೂರು, ಸಣ್ಣ ಹನುಮಪ್ಪ ಹುಳ್ಳಿ, ಸುರೇಂದ್ರಗೌಡ್ರ ಪಾಟೀಲ್, ರಾಜೀವ್ ರಡ್ಡಿ ಮಾದಿನೂರು, ಈರಣ್ಣ ಮಾಳೆಕೊಪ್ಪ, ಪ್ರಕಾಶ ಹಾಲವರ್ತಿ, ಗವಿಸಿದ್ದನಗೌಡ ಪಾಟೀಲ್, ಮೈಲಾರಪ್ಪ ಗೊಂಡಬಾಳ, ಗ್ರಾಪಂ ಸದಸ್ಯರಾದ ಶೇಖರಯ್ಯ ಇನಾಮದಾರ್, ನಾಗರಾಜ ಜಿ, ಯುವಕ ಗವಿಸಿದ್ದಪ್ಪ ಕುಂಬಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.