ಶಹಾಪುರ: ಪ್ರತಿಭೆಯನ್ನು ಜಾತಿ ಧರ್ಮದಿಂದ ಗುರುತಿಸಬೇಡಿ. ಪ್ರತಿಭೆಯನ್ನು ಪ್ರತಿಭೆಯಿಂದಲೇ ಗುರುತಿಸುವ ಕೆಲಸವಾಗಬೇಕು ಎಂದು ಸಮ್ಮೇಳನದ ಅಧ್ಯಕ್ಷರೂ ಆದ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಿ.ಎನ್.ಅಕ್ಕಿ ನುಡಿದರು.
ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಬರಗಾಲದಿಂದ ಜನರು ತತ್ತರಿಸುತ್ತಿದ್ದಾರೆ. ಏರಿದ ಬೆಲೆಗಳಿಂದ ಕಂಗಲಾಗಿದ್ದಾರೆ. ಸಕಾಲಕ್ಕೆ ಸಿಗದ ಸಂಬಳದಿಂದ ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು ಹಾಗೂ ಇತರೆ ನೌಕರಿವರ್ಗದವರು ಮತ್ತು ಪಂಚಾಯಿತಿ, ಪುರಸಭೆಗಳ ಸಫಾಯಿ ಕರ್ಮಚಾರಿಗಳು ಕಡಿಮೆ ಸಂಬಳದಲ್ಲಿ ಇಲ್ಲವೇ ಸಂಬಳವಿಲ್ಲದೆಯೂ ದಿನಾ ದುಡಿಯುತ್ತಿದ್ದಾರೆ. ಈ ಅತಂತ್ರತೆ ಭದ್ರತೆಯನ್ನು ನೀಗಿ ಈ ನೌಕರರ ಮತ್ತು ಅವರ ಪರಿವಾರದವರ ಉಪಜೀವನಕ್ಕೆ ಭರವಸೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದರು.
ಕನ್ನಡ ನುಡಿಗಾಗಿ ಪರಿಸರವಿಸಿದ ಎಲ್ಲ ಹಿರಿಯ-ಕಿರಿಯರನ್ನು ನೆನೆದು ನಮನಗಳನ್ನು ಸಲ್ಲಿಸುವೆ. ನಿಮ್ಮೆಲ್ಲರ ಪ್ರೀತಿ ಅಭಿಮಾನ ಒತ್ತಾಸೆಗೆ ಮಣೆದು ಶಹಾಪುರ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಕೊಂಡಿರುವೆ. ಇದಕ್ಕೆ ಸಂಭ್ರಮಿಸಲೆ, ನನ್ನನ್ನು ಬರಹಗಾರರನ್ನಾಗಿ ರೂಪಿಸಿ ಬೆಳೆಸಿದ ಸಗರನಾಡಿನ ಮಾಸ್ತಿ ಎನಿಸಿಕೊಂಡಿದ್ದ ಸಗರ ಕೃಷ್ಣಚಾರ್ಯರಿಗೆ, ಸಂಶೋಧನಾ ಕ್ಷೇತ್ರದಲ್ಲಿ ಕೈ ಹಿಡಿದು ನಡೆಸಿದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಶಾಸನ ತಜ್ಞ ಸೀತಾರಾಮ್ ಜಹಾಗೀರದಾರ್, ಪ್ರೊ.ಬಿ.ಆರ್.ಸುರಪುರ ಅವರುಗಳಿಗೆ ನ್ಯಾಯವಾಗಿ ದಕ್ಕ ಬೇಕಾದುದನ್ನು, ಸಿಕ್ಕ ಬೇಕಾದುದನ್ನು ನನಗೆ ಸಿಕ್ಕಿರುವುದಕ್ಕೆ ವಿಷಾದಪಡಲೇ? ವ್ಯಥೆಪಡಲೇ? ನೆನೆದಾಗ ಹೃದಯ ಭಾರವಾಗಿ ಕಣ್ಗಳು ತುಂಬಿ ಬರುತ್ತವೆ. ಹಿರಿಯರನ್ನು ಪೂಜ್ಯ ಭಾವದಿಂದ ಕಾಣುವ ಗೌರವಿಸುವ ಪ್ರಾಶಸ್ತ್ಯವನ್ನು ನೀಡುವ ಹಿರಿದಾದ ಪರಂಪರೆ ನಮ್ಮದು. ಯಾರದು ದಾಳಕ್ಕೆ, ತಾಳಕ್ಕೆ ಒಳಗಾಗಿ ಈ ಸತ್ಸಂಪ್ರದಾಯಕ್ಕೆ ಮಂಗಳ ಹಾಡುವುದು, ಯಾವುದೋ ಪ್ರಾತಿನಿಧಿಕ ಸಂಸ್ಥೆಗಳಿಗೆ ಶೋಭಿಸದು. ಮುಂದೆ ಇಂಥ ಪ್ರಮಾದಗಳಾಗದಂತೆ ಎಚ್ಚರದ ಆಯ್ಕೆಯಾಗಬೇಕು ಎಂಬುದೇ ನನ್ನ ಸದಾಶಯ ಎಂದರು.ಇತಿಹಾಸ ವರ್ತಮಾನಕ್ಕೆ ಅಗತ್ಯವಿದ್ದಂತೆ ಭವಿಷ್ಯಕ್ಕೆ ಬೆಳಕು ಇವುಗಳು ಜತನದಿಂದ ಕಾಯ್ದುಕೊಳ್ಳಬೇಕು. ನಮ್ಮ ಜನರು, ಮುಗ್ಧರು, ವಿಧೇಯರು, ದೈವ ಭಕ್ತಿಯುಳ್ಳವರು ಜಿಲ್ಲಾ, ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ವಿಚಾರ ಸಂಕೀರ್ಣ ಕಮ್ಮಟ ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಮಾಡುವುದು ಸೂಕ್ತ. ಈ ನೆಲ, ಜಲ, ಭಾಷೆಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದರು.
------2ವೈಡಿಆರ್18
ಶಹಾಪುರ ತಾಲೂಕಿನ ಭೀಮರಾಯನಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಿ.ಎನ್.ಅಕ್ಕಿ ಅವರು ಮಾತನಾಡಿದರು.