-ಸಾರ್ವಜನಿಕ ಕುಂದುಕೊರತೆಗಳು ಹಾಗೂ ಅಹವಾಲು ಸ್ವೀಕಾರ ಸಭೆಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ತಿಂಗಳ ಸಂಬಳ ಬರುತ್ತದೆ. ಆದರೆ, ರೈತರಿಗೆ ಯಾವ ಸಂಬಳವೂ ಬರುವುದಿಲ್ಲ. ಆದ್ದರಿಂದ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೇ ಶೀಘ್ರವಾಗಿ ಅವರ ಕೆಲಸಕಾರ್ಯಗಳನ್ನು ಮಾಡಿಕೊಡಿ ಎಂದು ಲೋಕಾಯುಕ್ತ ಎಸ್ಪಿ ಸ್ನೇಹ ಸೂಚಿಸಿದರು.ನಗರದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆಗಳು ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಒಳ್ಳೆಯದಲ್ಲ, ನಿಮ್ಮಗಳಿಗೆ ಸಮಸ್ಯೆಯಾದರೆ ನಿಮ್ಮ ಜೊತೆ ಯಾರು ಬರುವುದಿಲ್ಲ. ನ್ಯಾಯಾಲಯದಲ್ಲಿ ನೀವು ಒಬ್ಬರೇ ನಿಂತುಕೊಳ್ಳಬೇಕು ಎಂಬುದು ನಿಮ್ಮ ಗಮನದಲ್ಲಿರಲಿ ಎಂದು ಎಚ್ಚರಿಕೆ ನೀಡಿದರು.
ಮಾಹಿತಿ ಹಾಕಿ:ಲೋಕಾಯುಕ್ತಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆ ಪ್ರತಿ ಕಚೇರಿಯಲ್ಲೂ ಲಭ್ಯವಿರಬೇಕು. ಆದರೆ, ಯಾವುದೇ ಕಚೇರಿಯಲ್ಲೂ ಮಾಹಿತಿ ಫಲಕಗಳು ಇಲ್ಲ. ಕೂಡಲೇ ಎಲ್ಲಾ ಕಚೇರಿಯಲ್ಲೂ ಲೋಕಾಯುಕ್ತಕ್ಕೆ ಸಂಬಂಧಿಸಿದ ಮಾಹಿತಿ ಹಾಕಬೇಕು. ಗ್ರಾಪಂಗಳು ಕಡ್ಡಾಯವಾಗಿ ಈ ಸೂಚನೆ ಪಾಲಿಸಬೇಕು ಎಂದರು.
ಇಂದಿನ ಕುಂದುಕೊರತೆಗಳ ಸಭೆಯಲ್ಲಿ ಪಹಣಿ, ಇ ಖಾತೆ, ಕಾಮಗಾರಿ ಕಳಪೆ ಸೇರಿದಂತೆ ಹಲವಾರು ದೂರುಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರ ನಿರ್ಮೂಲನೆ ಒಂದೇ ಇಲಾಖೆಯ ಕೆಲಸವಲ್ಲ, ಸಾರ್ವಜನಿಕ ಸೇವೆಯಲ್ಲಿನ ಅಶಿಸ್ತು ಹಾಗೂ ನಿರ್ಲಕ್ಷ್ಯದ ವಿರುದ್ಧವೂ ಇಲಾಖೆ ಕ್ರಮ ವಹಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ಬದ್ಧತೆಯಿಂದ ಕೆಲಸ ಮಾಡುವಂತೆ ತಾಕೀತು ಮಾಡಿದರು.ಡಿವೈಎಸ್ಪಿ ಗೌತಮ್ ಮಾತನಾಡಿ, ಸಾರ್ವಜನಿಕ ಕೆಲಸ ಕಾರ್ಯಗಳನ್ನು ಕಾಲಮಿತಿಯೊಳಗೆ ಮಾಡಿಕೊಡದೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಸತಾಯಿಸುವುದು ಸಹ ಭ್ರಷ್ಟಾಚಾರದ ಒಂದು ಭಾಗ. ಭ್ರಷ್ಟಾಚಾರ ನಿಗ್ರಹ ಹಾಗೂ ಆಡಳಿತ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಇಲಾಖೆಯನ್ನು ಮುಕ್ತವಾಗಿ ಸಂಪರ್ಕಿಸಬಹುದು. ಗೌಪ್ಯತೆ ಕಾಪಾಡುವ ಜತೆಗೆ ಲೋಕಾಯುಕ್ತ ದೂರನ್ನು ಪರಿಶೀಲಿಸಿ, ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಲೋಕಾಯುಕ್ತ ಡಿವೈಎಸ್ಪಿ ಸುಧೀರ್, ಇನ್ಸ್‌ಪೆಕ್ಟರ್‌ಗಳಾದ ಸಂದೀಪ್, ಅನಂತರಾಮ್, ಹನುಮಂತಕುಮಾರ್ ಇತರರಿದ್ದರು.೨೧ ದೂರು ಸ್ವೀಕಾರ
ಸಾರ್ವಜನಿಕ ಕುಂದುಕೊರತೆಗಳು ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ೨೧ ಅರ್ಜಿ ಸಲ್ಲಿಸಿದರು. ಅದರಲ್ಲಿ ಬಹುಪಾಲು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಆಗಿವೆ. ನಗರದ ತಟ್ಟೇಕೇರೆಯಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮಿಲ್‌ನಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಎಲೇತೋಟದಹಳ್ಳಿ ಗ್ರಾಪಂನ ದೇವಸ್ಥಾನದ ರಸ್ತೆಯನ್ನು ಖಾಸಗಿಯವರಿಗೆ ಇ-ಖಾತೆ ಮಾಡಲಾಗಿದೆ. ಇ-ಖಾತೆಗೆ ನಗರಸಭೆಗೆ ಮನವಿ ಸಲ್ಲಿಸಿದ್ದರೂ ೨೦೧೯ರಿಂದ ಅಲೆದಾಡಿಸುತ್ತಿದ್ದಾರೆ ಎಂದು ರಾಜಾ ಕೆಂಪೇಗೌಡ ಬಡಾವಣೆಯ ನಿವಾಸಿ ಸೇರಿದಂತೆ ಇತರೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವರು ಲೋಕಾಯುಕ್ತಕ್ಕೆ ಅಹವಾಲು ಸಲ್ಲಿಸಿದರು.