ಯಾವುದೇ ಕಾರಣಕ್ಕೂ ಬಡವರು ಕಚೇರಿಗೆ ಅಲೆದಾಡುವಂತೆ ಮಾಡಬೇಡಿ: ಡಾ. ಪ್ರಭಾ ಮಲ್ಲಿಕಾರ್ಜುನ್

KannadaprabhaNewsNetwork |  
Published : Jun 04, 2025, 12:29 AM IST
ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರ ಮಠದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದು ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದು ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಸೀಕೆರೆ ಗ್ರಾಮಕ್ಕೆ ಸುತ್ತಮುತ್ತಲಿನ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ. ಅವರಿಗೆ ಸರಿಯಾದ ಬಸ್ ನಿಲ್ದಾಣ, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಅದಷ್ಟು ಬೇಗ ಸಮಸ್ಯೆ ಸರಿಪಡಿಸುತ್ತೇವೆ ಎಂದರು.

ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ 7 ಗ್ರಾಪಂಗಳಿದ್ದು ಪ್ರತಿ ವರ್ಷ ನೀರಿನ ಅಭಾವ ಉಂಟಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವೆ ತಾಲೂಕಿನಲ್ಲಿ ಬರುವ ಪ್ರಾಚೀನ ಪುರಾತತ್ವ ದೇವಾಲಯಗಳ ಅಭಿವೃದ್ದಿಗೆ ರೂಪರೇಷಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದರು.

ಇ-ಸ್ವತ್ತುಗಳನ್ನು ಪಿಡಿಒಗಳು ಮನೆ ಬಾಗಿಲಿಗೆ ತೆರಳಿ ನೀಡಬೇಕು, ಯಾವುದೇ ಕಾರಣಕ್ಕೂ ಬಡಜನರನ್ನು ತಮ್ಮ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಸೂಚಿಸಿದರು.

ವಿಜಯನಗರ ಜಿಲ್ಲಾದಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕಿನ ಎಲ್ಲಾ ಸ್ಮಶಾನಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕೆಲ ಭಾಗಗಳಲ್ಲಿ ಸ್ಮಶಾನದ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನುವ ದೂರುಗಳಿವೆ. ಇನ್ನು ಕೆಲ ಕಡೆ ಮಳೆ ಬಂದರೆ ಸ್ಮಶಾನದ ಜಾಗದಲ್ಲಿ ನೀರು ನಿಂತು ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿರುವ ಕುರಿತು ದೂರು ಬಂದಿದ್ದು, ಕೂಡಲೇ ಅವುಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗವುದು ಎಂದು ಹೇಳಿದರು.

ಅರಸೀಕೆರೆ ಬಸ್ ನಿಲ್ದಾಣ, ಮತ್ತು ಶೌಚಾಲಯ ನಿರ್ಮಿಸಲು ಸಾರ್ವಜನಿಕರಿಂದ ಮನವಿ ಬಂದಿದ್ದು, ಶೀಘ್ರದಲ್ಲೇ ಬಸ್ ನಿಲ್ದಾಣದ ಪಕ್ಕ ಸುಸಜ್ಜಿತವಾದ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ೧೦೦ ಬಾಲಕಿಯರು ಇರುವ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವೆ ಎಂದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇರುವ ನೂರಾರು ಸಮಸ್ಯೆ ಪರಿಹರಿಸಲು ನೀವು ದೂರದ ಪಟ್ಟಣಕ್ಕೆ ಅಲೆದಾಡುವುದನ್ನು ತಪ್ಪಿಸುವ ಉದ್ದೆಶದಿಂದ ಅರಸೀಕೆರೆಯಲ್ಲಿಯೇ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ ಬಿ.ವಿ. ಗಿರೀಶ್ ಬಾಬು, ಇಒ ಚಂದ್ರಶೆಖರ್, ಗ್ರಾಪಂ ಅಧ್ಯಕ್ಷೆ ಕೆ.ಹಾಲಮ್ಮ, ಮುಖಂಡರಾದ ಎನ್.ಕೊಟ್ರೇಶ್, ಶಾಂತಕುಮಾರರೆಡ್ಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?