ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ಸದೃಢ ಶರೀರ ಕಾಯ್ದುಕೊಳ್ಳಬೇಕಾದರೆ ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಉಮೇಶ ಅರಹುಣಸಿ ಸಲಹೆ ನೀಡಿದರು.
ಶಿರಹಟ್ಟಿ: ಆರೋಗ್ಯ ತಪಾಸಣೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಉಮೇಶ ಅರಹುಣಸಿ ಸಲಹೆ ನೀಡಿದರು.
ರೆಡ್‌ಕ್ರಾಸ್, ಎನ್‌ಎಸ್‌ಎಸ್ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿ ಇವುಗಳ ಸಹಯೋಗದೊಂದಿಗೆ ಪಟ್ಟಣದ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ದೀರ್ಘಾಯುಷ್ಯಕ್ಕೆ ಸದೃಢ ಶರೀರ ಕಾಯ್ದುಕೊಳ್ಳಬೇಕಾದರೆ ವಿದ್ಯಾರ್ಥಿಗಳು, ಸ್ತ್ರೀ-ಪುರುಷರು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು. ಬದಲಾದ ಜೀವನ ಶೈಲಿ ಮತ್ತು ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ತೊಡಗಿಸಿಕೊಂಡಿರುವ ಯುವ ಜನತೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ತಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಸದೃಢ ದೇಹದಲ್ಲಿ ಸಮೃದ್ಧ ಮನಸ್ಸಿರುತ್ತದೆ. ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಲು ಸಾಧ್ಯ ಎಂದರು.
ರೋಗಿಗಳಲ್ಲಿ ದೇವರನ್ನು ಕಾಣಬೇಕು. ಉತ್ತಮ ಚಿಕಿತ್ಸೆ ನೀಡಬೇಕು. ಮಾತಿನಲ್ಲಿಯೇ ರೋಗಿಯ ಅರ್ಧ ಕಾಯಿಲೆ ಗುಣಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂವೇದನೆಶೀಲತೆ, ಮಾನವೀಯತೆಯ ಗುಣಗಳನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಮಾತೃ, ಪಿತೃ, ಗುರು ಹಾಗೂ ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ಆದ್ದರಿಂದ ವೈದ್ಯರಾದವರು ತಮ್ಮ ವೃತ್ತಿಯನ್ನು ಹಣಕ್ಕಾಗಿ ಮಾಡದೆ ಸೇವೆಯಾಗಿ ಮಾಡಬೇಕು. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ಹೇಳುವ ಮೂಲಕ ಹೆತ್ತವರು, ಹಿರಿಯರು, ಗುರುಗಳು ಗೌರವಿಸಬೇಕು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ್ದು ಭಾರತೀಯ ಸಂಸ್ಕೃತಿ ನಮ್ಮದು ಎಂದರು.
ಡಾ. ನಾಗರತ್ನಾ ಕಾಲೊಳಗಿ, ಡಾ. ಕಮಲಾಕ್ಷಿ ಅಂಗಡಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗಲು ವೈಯಕ್ತಿಕ ಸ್ವಚ್ಛತೆಯ ಕಡೆ ಗಮನ ಹರಿಸಬೇಕು. ಆನಂತರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಸಿ.ಕೆ. ಜಾಲಿ, ದಂತ ವೈದ್ಯ ಡಾ. ಪಿ.ಎಸ್. ಉಗಲಾಟದ, ವೀಣಾ ತಿರ್ಲಾಪುರ, ಡಾ. ಆರ್.ಬಿ. ಉಪ್ಪಿನ, ಡಾ. ಶ್ರೀಧರ್, ರಾಜು ನಾಯಕ, ಪ್ರೊ. ಫಕೀರೇಶ ಜಾಲಿಹಾಳ, ಪ್ರೊ. ದೇವರಾಜ ದಾನಣ್ಣನವರ, ಡಾ. ಹನುಮಂತ ತಳ್ಳಳ್ಳಿ, ಪ್ರೊ. ಬಸವರಾಜ ಕುರಗುಂದ, ಡಾ. ಶಂಕರ ಬಾರಿಕೇರ, ವಸಂತ ಪೂರ್ಣಿಮಾ, ಜಯಪ್ರಕಾಶ ವನಹಳ್ಳಿ, ಚಂದ್ರಶೇಖರ ಮಠಪತಿ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.