ಹರಪನಹಳ್ಳಿ: ನಮ್ಮ ಅವಧಿ ಮುಗಿಯುತ್ತದೆ ಎಂದು ಜನರ ಕೆಲಸ, ಕಾರ್ಯ ನಿರ್ಲಕ್ಷ್ಯ ಮಾಡಬೇಡಿ. ಇದರಲ್ಲಿ ಶೇ.50 ಸದಸ್ಯರು ಪುನಃ ಇಲ್ಲಿಗೆ ಬರುತ್ತಾರೆ, ತಾಳ್ಮೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಾವು ಹೊರಗ ಹೋಗಬಹುದು. ಆದರೆ ನಮ್ಮ ಸರ್ಕಾರ ಇದೆ, ನಮ್ಮ ಶಾಸಕರು ಇದ್ದಾರೆ...ಇದು ಗುರುವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ಎಂ.ವಿ. ಅಂಜಿನಪ್ಪ ಹಾಗೂ ಡಿ.ಅಬ್ದುಲ್ ರಹಿಮಾನ್ ಸಾಹೇಬ್ ಹಾಗೂ ಇತರ ಸದಸ್ಯರು ಪುರಸಭಾ ಸಿಬ್ಬಂದಿಗೆ ಹೇಳಿದ ಎಚ್ಚರಿಕೆ ಮಾತು.
ಇನ್ನೊಬ್ಬ ಹಿರಿಯ ಸದಸ್ಯ ಡಿ.ಅಬ್ದುಲ್ ರಹಿಮಾನ್ ಮಾತನಾಡಿ, ನಾವು ಹೊರಗೆ ಹೋಗಬಹುದು,.ಆದರೆ ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಇಲ್ಲಿ ನಮ್ಮ ಶಾಸಕರಿದ್ದಾರೆ ಎಂದು ಹೇಳಿದರು.
ಮಧ್ಯ ಪ್ರವೇಶ ಮಾಡಿದ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಜನರನ್ನು ಅಲೆದಾಡಿಸಬಾರದು. ಸ್ಪಂದಿಸಿ ತ್ವರಿತವಾಗಿ ಕೆಲಸ ಮಾಡಿ ಕೊಡಿ ಎಂದು ತಮ್ಮ ಸಿಬ್ಬಂದಿಗೆ ಸೂಚಿಸಿದರು.ನಾಮನಿರ್ದೆಶಿತ ಸದಸ್ಯ ಗುಡಿನಾಗರಾಜ ಮಾತನಾಡಿ, ಹೊಸ ಪೈಲುಗಳು ಬೇಗ ನಿಮ್ಮ ಚೇಂಬರಿಗೆ ಬರುತ್ತವೆ. ಹಳೆ ಪೈಲುಗಳು ಅಲ್ಲೇ ಉಳಿಯುತ್ತವೆ ಎಂದು ಮುಖ್ಯಾಧಿಕಾರಿಗೆ ಹೇಳಿದರು.
ಉದ್ದಾರ ಗಣೇಶ ಮಾತನಾಡಿ, ಪಟ್ಟಣದಲ್ಲಿ ಅಕ್ರಮ ನಳ ಬಹಳಷ್ಟಿವೆ. ತೆರವುಗೊಳಿಸಿ ಎಂದು ಕೋರಿದಾಗ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಅನಧಿಕೃತ ನಳಗಳನ್ನು ಪತ್ತೆ ಹಚ್ಚಿ ಶುಲ್ಕ ಪಾವತಿಸಿಕೊಂಡು ಅಧಿಕೃತ ಮಾಡಲಾಗುವುದು ಎಂದು ಹೇಳಿದರು.
ಬೀದಿದೀಪಗಳನ್ನು ಸಮರ್ಪಕ ನಿರ್ವಹಣೆ ಮಾಡಿ ಎಂದು ಎಂ.ವಿ. ಅಂಜಿನಪ್ಪ ಒತ್ತಾಯಿಸಿ, ಪಟ್ಟಣದಲ್ಲಿ ಹೊಸ ಹೈಮಾಸ್ಟ್ ಲೈಟ್ ಗಳನ್ನು ಮಂಜೂರು ಮಾಡಿಸಿದ್ದಕ್ಕಾಗಿ ಶಾಸಕರಿಗೆ ಅಭಿನಂದನೆ ಎಂದು ಹೇಳಿದರು.
ಸಹಾಯಕ ಆಯುಕ್ತರ ವಸತಿ ನಿಲಯದ ಹತ್ತಿರ ಇರುವ ಶಿಥಿಲ ಅವಸ್ಥೆಯಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಾಗಾರವನ್ನು ತೆರವುಗೊಳಿಸಲು ಸಭೆ ಒಪ್ಪಿಗೆ ಸೂಚಿಸಿತು.