ಹುಬ್ಬಳ್ಳಿ:
ಈ ಮನೆಯಿಂದ ಹೊರಗೆ ರಾಜಕಾರಣ ಮಾಡಿ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.ಇಲ್ಲಿನ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಇವತ್ತು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹಾ ಕೇವಲ ನಿರಂಜನ್ ಹಿರೇಮಠ ಪುತ್ರಿ ಅಲ್ಲ ಇಡೀ ಕರ್ನಾಟಕದ ಪುತ್ರಿ. ನಿರಂಜನ್ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲ ಅವರ ಜತೆ ಇದ್ದೇವೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವುದು ಸರ್ಕಾರದ ಕರ್ತವ್ಯ. ಆ ಕೆಲಸ ಸರ್ಕಾರ ಮಾಡುತ್ತದೆ. ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು. 90 ದಿನಗಳಲ್ಲಿ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎಂದರು.ಆದರೆ ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ಈ ಸಾವಿನ ಮನೆಯಲ್ಲಿ ರಾಜಕಾರಣ ಮಾಡಬೇಡಿ. ಚುನಾವಣೆ ವೇಳೆ ಈ ಪ್ರಕರಣವನ್ನು ರಾಜಕೀಕರಣ ಮಾಡುವುದು ಬೇಡ. ಈ ಮನೆ ಹೊರತುಪಡಿಸಿ ರಾಜಕೀಯ ಮಾಡಿ. ನಾವು ರಾಜಕಾರಣ ಮಾಡುತ್ತೇವೆ ಎಂದರು.
ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. 90 ದಿನಗಳಲ್ಲಿ ನ್ಯಾಯ ಸಿಗುತ್ತದೆ ಎಂದರು.ಈ ವೇಳೆ ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ವಿಪ ಮುಖ್ಯ ಸಚೇತಕ ಸಲೀಂಅಹ್ಮದ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಅಲ್ತಾಫ್ ಹಳ್ಳೂರ, ಪ್ರಕಾಶಗೌಡ ಪಾಟೀಲ, ಮಹೇಂದ್ರ ಸಿಂಘಿ ಸೇರಿದಂತೆ ಹಲವರಿದ್ದರು.