ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ: ಡಾ. ಗವಿಸಿದ್ದಪ್ಪ

KannadaprabhaNewsNetwork | Published : Jun 29, 2024 12:40 AM

ಸಾರಾಂಶ

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಮಾದಕ ವಸ್ತುಗಳ ಸೇವನೆ ಸೇರಿದಂತೆ ವಿವಿಧ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಪ್ರಾಂಶುಪಾಲ ಡಾ. ಗವಿಸಿದ್ದಪ್ಪ ಮುತ್ತಾಳ್ ಹೇಳಿದರು.

ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆ ಅನೇಕ ಅಪರಾಧ ಕೃತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಮಾದಕ ವ್ಯಸನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಜನತೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಬೇರೆಯವರಿಗೂ ಜಾಗೃತಿ ಮೂಡಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.

ಅಳವಂಡಿ ಪೋಲಿಸ್ ಠಾಣೆಯ ಪಿಎಸ್ಐ ನಾಗರಾಜ್ ಎಚ್. ಮಾತನಾಡಿ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ವಿದ್ಯಾರ್ಥಿಗಳು ಇದರಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಅಳವಂಡಿ ಪೋಲಿಸ್ ಠಾಣೆಯ ಎಎಸ್ಐ ಶಶಿಕಾಂತ್, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಇಮಾಮ್ ಸಾಬ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್,

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗೇಂದ್ರಪ್ಪ, ಉಪನ್ಯಾಸಕರಾದ ವಿಜಯ್ ಕುಮಾರ್ ಕುಲಕರ್ಣಿ, ಸಿದ್ದಪ್ಪ, ಪ್ರದೀಪ್ ಪಲ್ಲೇದ್, ವೆಂಕಟೇಶ್, ಅನಿಲ್, ವಿನಾಯಕ್ ನಾಯ್ಕ್, ವೀರಯ್ಯ ಮಠದ್, ರಹಿಮಾನ್ ಸಾಬ್, ರಾಘವೇಂದ್ರ, ಹನುಮೇಶ್, ಕೃಷ್ಣ, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article