ಹಾನಗಲ್ಲ: "ಹಾನಗಲ್ಲ ತಾಲೂಕಿನ ದತ್ತಕಪುತ್ರ " ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಶಾಸಕ ಶ್ರೀನಿವಾಸ ಮಾನೆ ಅವರು ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದರೆ ಟೀಕೆ ಎಂದು ಭಾವಿಸುವುದುತುತ್ತಮ ನಡೆ ಅಲ್ಲ ಎಂದು ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ ಪ್ರತಿಕ್ರಿಯಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲನ್ನು ಬಹುಕಾಲ ಪ್ರತಿನಿಧಿಸಿದ ದಿವಂಗತರಾದ ಸಿ.ಎಂ. ಉದಾಸಿ ಹಾಗೂ ಮನೋಹರ ತಹಶೀಲ್ದಾರ ಅವರ ಅಭಿವೃದ್ಧಿ ಕೆಲಸಗಳನ್ನು ಶಾಸಕ ಶ್ರೀನಿವಾಸ ಮಾನೆ ಒಮ್ಮೆ ಅವಲೋಕಿಸಲಿ ಎಂದು ಕಿವಿಮಾತು ಹೇಳಿದರು.
ಆರೋಗ್ಯ, ಶಿಕ್ಷಣ, ವಿದ್ಯುತ್, ನೀರಾವರಿ ಹಾಗೂ ರೈತರ ಸಮಸೆಗಳಿಗೆ ವಿಳಂಬವಿಲ್ಲದೆ ಸಹಕರಿಸಿ ಅಭಿವೃದ್ಧಿಯ ದೊಡ್ಡ ಪಥವನ್ನೆ ನಿರ್ಮಿಸಿದ್ದಾರೆ. ಇಂದು ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಆಸ್ಪತ್ರೆಗೆ ಹೋದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಆಸ್ಪತ್ರೆಗಳಲ್ಲಂತೂ ತುರ್ತು ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ಉಪಚಾರವಿಲ್ಲದೆ ಮರಣವನ್ನಪ್ಪಿದ ಘಟನೆಗಳಿವೆ. 108 ವಾಹನಕ್ಕೆ ಡೀಸೆಲ್, ಟೈರ್, ಡ್ರೈವರ್ ಇಲ್ಲ. ಶಾಸಕ ಮಾನೆ ಅವರಿಗೆ ಈ ಸಮಸ್ಯೆಗಳು ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದರು.ತಾಲೂಕಿನಲ್ಲಿ ಅತ್ಯಂತ ಉತ್ತಮ ರಸ್ತೆಗಳೆಲ್ಲ ಹಾಳಾಗಿ ಗುಂಡಿ ಬಿದ್ದಿವೆ. ಅಪಘಾತಗಳಾಗುತ್ತಿವೆ. ತಾಲೂಕಿನಲ್ಲಿ ಅಕ್ರಮ ಗೋಸಾಗಣೆ ನಿರಂತರವಾಗಿ ನಡೆದಿದೆ. ಮಧ್ಯ, ಗಾಂಜಾ ಮಾರಾಟ, ಜೂಜಾಟಗಳಿಗೆ ಯಾವುದೇ ಕಡಿವಾಣಗಳಿಲ್ಲ. ಬಡವರ ರೇಶನ್ ಅಕ್ಕಿ ಶ್ರೀಮಂತ ವ್ಯಾಪಾರಸ್ಥರ ಪಾಲಾಗುತ್ತಿದೆ. ಈ ಬಗ್ಗೆ ಕೇಳಿದರೆ ಟೀಕೆ ಎಂದು ಪರಿಗಣಿಸುವದು ಎಷ್ಟರ ಮಟ್ಟಿಗೆ ಸರಿ? ವಾಸಿಸುವನೇ ಮನೆಯೊಡೆಯ ಯೋಜನೆಯಲ್ಲಿ ಹಕ್ಕುಪತ್ರ ನೀಡುತ್ತಿರುವುದು ಸ್ವಾಗತಾರ್ಹವೇ. ಆದರೆ ಇಲ್ಲಿ ಜಾಗ ಕಳೆದುಕೊಂಡವರಿಗೆ ಪರಿಹಾರ ನೀಡಬೇಕಲ್ಲವೇ? ಎಂದರು.ಹಾನಗಲ್ಲ ಬಸ್ ಡಿಪೋದ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ನಮ್ಮ ಸಹಕಾರ ಅಭಿವೃದ್ಧಿ ಪರವಾಗಿದೆ. ಆದರೆ ಅವರು ಹಾನಗಲ್ಲ ತಾಲೂಕಿನ ಅಭಿವೃದ್ಧಿ ಮಾಡುವ ಮೂಲಕ ದತ್ತಕ ಪುತ್ರ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು..ಈ ಸಂದರ್ಭದಲ್ಲಿ ಬಸವರಾಜ ಹಾದಿಮನಿ, ಸಿದ್ದಲಿಂಗಪ್ಪ ತುಪ್ಪದ, ಮಹೇಶ ಹಿರೇಮಠ ಇದ್ದರು.