ಚನ್ನಪಟ್ಟಣ: ಪೊಲೀಸ್ ಆಡಳಿತವನ್ನು ಜನಸ್ನೇಹಿಯಾಗಿಸಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಜನರೊಂದಿಗೆ ಸಮನ್ವಯತೆ ಸಾಧಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಡಿವೈಎಸ್‌ಪಿ ಕೆ.ಸಿ.ಗಿರಿ ತಿಳಿಸಿದರು.
ಜನರೊಂದಿಗೆ ಸಮನ್ವಯತೆ ಸಾಧಿಸಿ, ಪೊಲೀಸ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ನಾಲ್ಕೈದು ಹಳ್ಳಿಗಳಿಗೆ ಒಂದು ಬೀಟ್ ಎಂದು ಮಾಡಿ ಕನಿಷ್ಠ ಇಬ್ಬರು ಪೊಲೀಸರನ್ನು ನೇಮಿಸಲಾಗುತ್ತಿತ್ತು. ಅವರು ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳಿ ಠಾಣಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಈ ಕಾರ್ಯಕ್ರಮದ ಅಡಿಯಲ್ಲಿ ಈಗ ಮನೆ-ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.
ಕಾರ್ಯಕ್ರಮದ ಅನ್ವಯ ನಗರದ ಪ್ರತಿ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಸುಮಾರು ೫೦ ಮನೆಗಳ ಒಂದು ಲಿಸ್ಟ್ ತಯಾರಿಸಿ, ಒಂದು ಗುಂಪನ್ನು ಸೃಷ್ಟಿಸಬೇಕು. ಪ್ರತಿ ಮನೆಗೆ ಆ ಬೀಟ್‌ನ ಪೇದೆ ತೆರಳಿ ಮನೆಯ ಹಿರಿಯರನ್ನು ಮಾತನಾಡಿಸಿ, ಅವರ ಸಮಸ್ಯೆ ಆಲಿಸಿ, ಅವರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು. ಕನಿಷ್ಠ ತಿಂಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದರು.ತುರ್ತು ಪರಿಸ್ಥಿಯಲ್ಲಿ 112ಗೆ ಕರೆ ಮಾಡಿದರೆ, ಪೊಲೀಸರು ತುರ್ತಾಗಿ ಆಗಮಿಸುತ್ತಾರೆ. ಈ ವ್ಯವಸ್ಥೆಯ ಬಗ್ಗೆಯೇ ಎಷ್ಟೋ ಜನರಿಗೆ ಅರಿವಿಲ್ಲ. ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಗುವುದು. ಇದರಿಂದ ಪೊಲೀಸರ ಬಗ್ಗೆ ಜನರಿಗೆ ಇರುವ ಭಯ ದೂರವಾಗುತ್ತದೆ. ಪೊಲೀಸರು ಇರುವುದೇ ನಮಗಾಗಿ ಎಂಬ ಭಾವನೆ ಮೂಡಿಸಲು ಸಹಕಾರಿಯಾಗಿದೆ ಎಂದರು.
ಇದೇ ವೇಳೆ ಮನೆ-ಮನೆಗೆ ತೆರಳಿದ ಪೊಲೀಸರು, ತುರ್ತು ಸಂದರ್ಭಗಳಲ್ಲಿ 112ಗೆ ಉಪಯೋಗಿಸುವಂತೆ ಹಾಗೂ ಇತರ ಇಲಾಖಾ ಸಂಬಂಧ ಮಾಹಿತಿಗಳನ್ನು ನೀಡಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟವಂತೆ ಹಾಗೂ ಬೀಟ್ ಪೊಲೀಸ್, ಠಾಣಾ ಪಿಎಸ್‌ಐ, ಟೋಲ್ ಫ್ರೀ ಹಾಗೂ ಕಂಟ್ರೋಲ್ ರೂಮ್ ನಂಬರ್‌ಗಳ ಮಾಹಿತಿ ನೀಡಲಾಯಿತು.
19ಸಿಪಿಟಿ2:ಚನ್ನಪಟ್ಟಣದ ಬಡಾಮಕಾನ್‌ನಲ್ಲಿ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.