ಗದಗ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ನಡೆಸಲಾಗುತ್ತಿದೆ. ಈಗಾಗಲೇ ಶೇ. 94.14ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ ಕುರಿತು ರಾಜ್ಯಾದ್ಯಂತ ಸಾಕಷ್ಟು ಚರ್ಚೆಗಳು ನಡೆದಿವೆ. ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಪಾರದರ್ಶಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆಲಾಗುವುದು. ಅರ್ಹ ಯಾವೊಬ್ಬ ಮತದಾರನೂ ಪಟ್ಟಿಯಿಂದ ಹೊರಗುಳಿಯಬಾರದು, ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದರು. ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ. 94.14ರಷ್ಟು ನೈಜ ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್‌ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ. ವಿಶೇಷ ಪರಿಷ್ಕರಣೆಯ ಭಾಗವಾಗಿ ಜೂ. 30ರಿಂದ ಜು. 29ರ ವರೆಗೆ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ನಂತರ ಆ. 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ನಂತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ಗಣತಿ ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ರಾಜಕೀಯ ಪಕ್ಷಗಳು ಈ ಬೃಹತ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದರು. ಮತಪಟ್ಟಿಗೆ ಸೇರ್ಪಡೆ: ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ ಎಂದ ಅವರು, ಈ ಕುರಿತು ಇರುವ ಸಾಧ್ಯತೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.ಮನೆ ಗಣತಿ ತರುವಾಯ ಆ. 5ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಮತದಾರ ಪಟ್ಟಿಗೆ ಆಕ್ಷೇಪಣೆಗಳ ಸಲ್ಲಿಕೆಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಅ. 3ರ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥದ ನಂತರ, ಅ. 7ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ನಂತರ ಈಗ ಜಾರಿಯಲ್ಲಿರುವ ಎಲ್ಲ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ರದ್ದಾಗಲಿದ್ದು, ಪರಿಷ್ಕೃತ ಮತದಾರರ ಪಟ್ಟಿ ಮಾತ್ರ ಊರ್ಜಿತವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಚುನಾವಣಾ ಶಾಖೆಯ ತಹಸೀಲ್ದಾರ್ ಸಂತೋಷಕುಮಾರ ಹಿರೇಮಠ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.