ಕನ್ನಡಪ್ರಭ ವಾರ್ತೆ ಕಾರಟಗಿ
ತುಂಗಭದ್ರ ಅಣೆಕಟ್ಟೆಯಲ್ಲಿ ಸಮರ್ಪಕ ನೀರಿಲ್ಲದೇ ಹಾಕಿದ ಭತ್ತ ಕೈ ಸೇರುತ್ತೋ ಇಲ್ಲವೋ ಎಂದು ಆತಂಕದಲ್ಲಿ ದಿನದೂಡುತ್ತಿದ್ದ ರೈತರಿಗೆ ಬುಧವಾರ ರಾತ್ರಿ ಸುರಿದ ವಿಶಾಖ ಮಳೆ ಮತ್ತೊಂದು ಬರೆ ಎಳೆದಿದೆ.
ಬುಧವಾರ ರಾತ್ರಿ ಇಡೀ ಮಳೆ ಬಿದ್ದ ಬೆಳೆ ಹಾನಿಯಾದ ಮಾಹಿತಿ ಬರುತ್ತಿದ್ದಂತೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಕೃಷಿ ಅಧಿಕಾರಿ ಸಂತೋಷ್ ಪಟ್ಟದಕಲ್ಲು, ಕಂದಾಯ ಅಧಿಕಾರಿಗಳ ಮತ್ತು ಕೃಷಿ ಅಧಿಕಾರಿಗಳೊಂದಿಗೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹಲವು ಕಡೆ ಆರ್‌ಎನ್‌ಆರ್ ತಳಿಯ ಬೆಳೆ ತನೆ ಒಡೆದು ಕಾಳು ತುಂಬುವ ಹಂತದಲ್ಲಿದ್ದರೆ, ನದಿ ಸೀಮೆಯಲ್ಲಿ ಕಟಾವು ಹಂತಕ್ಕೆ ಬಂದು ನಿಂತಿತ್ತು. ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೨೫೦ ಹೆಕ್ಟೇರ್ ಪ್ರದೇಶ ಮತ್ತು ಕಾರಟಗಿ ಹೋಬಳಿಯಲ್ಲಿ ೩೦೦ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಕಟ್ಟಾವು ಆರ್ದೆ. ಉಳಿದೆಡೆ ೧೫ ದಿನಗಳಲ್ಲಿ ಕಟಾವು ಮಾಡುವ ಹಂತದಲ್ಲಿ ಬೆಳೆ ಇತ್ತು. ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ಪಾತ್ರದ ಈಳಿಗನೂರು, ಉಳೇನೂರು, ಬೆನ್ನೂರು, ಜಮಾಪುರ ಭಾಗದಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಕಟಾವು ಹಂತಕ್ಕೆ ಬಂದ ಪೈರು ನೆಲಕ್ಕುರಿಳಿದೆ.
ಬೆಳೆ ಹಾನಿ: ಕಾರಟಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 15000 ಹೆಕ್ಟರ್ ಪ್ರದೇಶದಲ್ಲಿ ನಾಟಿಯಾಗಿದೆ. 14,500 ಹೆಕ್ಟರ್ ಕಟಾವು ಬಾಕಿ ಇತ್ತು. ಸಿದ್ದಾಪುರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 16 ಸಾವಿರ ಹೆ.ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದು, ೩೫೦ ರಿಂದ ೪೦೦ ಎಕರೆ ಪ್ರದೇಶ ಕಟಾವು ಆದ ಅಂದಾಜಿದೆ.ಎಲ್ಲೆಲ್ಲಿ ಹಾನಿ?: ಹುಳ್ಳಿಹಾಳ, ತೊಂಡಿಹಾಳ, ಹಗೇದಾಳ, ಬೇವಿನಾಳ, ಪನ್ನಾಪುರ, ಬಸವಣ್ಣ ಕ್ಯಾಂಪ್, ಚೆಳ್ಳೂರು ಭಾಗದಲ್ಲಿ ಅತಿಹೆಚ್ಚು ಆರ್‌ಎನ್‌ಆರ್ ತಳಿ ನಾಟಿಯಾಗಿದೆ. ಅತಿಹೆಚ್ಚು ನಷ್ಟದ ಅಂದಾಜಿದೆ. ಬೂದುಗುಂಪಾ, ಯರಡೋಣಾ, ಕಿಂದಿ ಕ್ಯಾಂಪ್, ಮರ್ಲಾನಹಳ್ಳಿ, ರವಿನಗರ, ಸಿದ್ದಾಪುರ, ಗುಂಡೂರು, ಸಿಂಗನಾಳ, ಮುಷ್ಟೂರು, ಬರಗೂರು, ಕೊಟ್ನೆಕಲ್, ಕುಂಟೋಜಿ, ಜಮಾಪುರ, ಅರುಣೋದಯ ತಾಂಡ, ಈಳಿಗನೂರು, ಉಳೇನೂರು, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ ಸೇರಿ ತಾಲೂಕಿನಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿನ ಭತ್ತದ ಬೆಳೆ ಸಂಪೂರ್ಣ ಮಕಾಡೆ ಮಲಗಿದೆ. ಆದರೆ ಅಧಿಕಾರಿಗಳು ಸರ್ವೇ ನಂತರ ಎಲ್ಲೆಲ್ಲಿ? ಎಷ್ಟು? ನಷ್ಟವಾಗಿದೆ ಎಂಬುದು ತಿಳಿಯಲಿದೆ.