ವೃತ್ತಿಯಲ್ಲಿ ಸಾರ್ಥಕತೆ ಮೆರೆಯಬೇಕು: ರಾಜಯ್ಯ

KannadaprabhaNewsNetwork | Published : Jun 10, 2024 12:32 AM

ಸಾರಾಂಶ

ಹುಟ್ಟು ಮತ್ತು ಸಾವು ಜೀವನದ ಅವಿಭಾಜ್ಯ ಅಂಗ. ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು,

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ವೃತ್ತಿಯಲ್ಲಿ ಸಾರ್ಥಕತೆ ಮೆರೆದರೆ ನೆಮ್ಮದಿಯಿಂದಿರಲು ಸಾಧ್ಯ ಎಂದು ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಎಚ್‌. ರಾಜಯ್ಯ ಹೇಳಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಲಯಗಳು ಪಾಠ ಶಾಲೆಗಳಿದ್ದಂತೆ. ನಿಲಯಪಾಲಕರು ಪೋಷಕರಷ್ಟೇ ಮಕ್ಕಳಲ್ಲಿನ ಪ್ರತಿಭೆಗಳನ್ನು ಗರುತಿಸುವ, ಸಂಶೋಧಿಸುವ, ಪುರಸ್ಕರಿಸುವ, ಉತ್ತೇಜಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಸೇರಿದಂತೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸುದೀರ್ಘ 34 ವರ್ಷಗಳ ಕಾಲ ಶಿಕ್ಷಕರಾಗಿ, ನಿಲಯಪಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಎಚ್. ರಾಜಯ್ಯ ಅವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಹುಟ್ಟು ಮತ್ತು ಸಾವು ಜೀವನದ ಅವಿಭಾಜ್ಯ ಅಂಗ. ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು, ಆದರೆ ಹುಟ್ಟು ಮತ್ತು ಸಾವಿನ ನಡುವೆ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕುವುದು ತುಂಬ ಕಷ್ಟ. ಅಂತಹ ಕಷ್ಟದ ಹಾದಿಯಲ್ಲಿ ಬದುಕಿ ಹಿರಿಯರು ಮತ್ತು ಕಿರಿಯರು ಸೇರಿದಂತೆ ಎಲ್ಲರಿಂದಲೂ ಸಂಸ್ಕಾರಯುತ ವ್ಯಕ್ತಿ ಎಂದು ಬದುಕಿದವರಲ್ಲಿ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಯಾವುದೇ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಮಾಡುವ ಕೆಲಸಗಳು ಅವರಿಗೆ ಗೌರವ ಹೆಚ್ಚಿಸುವಂತಿರಬೇಕು. ಅಂತಹ ಗೌರವ ಸಂಪಾದನೆಯಲ್ಲಿ ಬದುಕಿ ತೋರಿಸಬೇಕು. ಬಡತನದಲ್ಲಿ ಹುಟ್ಟಿ ಕೃಷಿಕರಾಗಿ, ನಂತರ ನೌಕರರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡು ಸಮಾಜದಲ್ಲಿನ ಅನೇಕ ಅಸಹಾಯಕರಿಗೆ, ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

ಶಿಷ್ಯಕೋಟಿ ಸಾಗರದಷ್ಟಿದ್ದು ಸರ್ಕಾರದಲ್ಲಿ ಗುರುತರವಾದ ಹುದ್ದೆಗಳನ್ನು ಅಲಂಕರಿಸುವ ಮುಲಕ ಸಮಾಜದ ಕಣ್ಣುಗಳಾಗಿರುವುದು ಹೆಮ್ಮಯ ಸಂಗತಿ. ಇಷ್ಟು ದೊಡ್ಡ ಅನುಭವ ಉಳ್ಳವರಾಗಿ ನಿವೃತ್ತಿಯಾಗಿರುವುದು ವೃತ್ತಿಗೆ ಹೂರತು ಪ್ರವೃತ್ತಿಗಲ್ಲ ಎಂದು ಭಾವಿಸಿ ಸಮಾಜಸೇವೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ನೊಂದವರಿಗೆ ಆಶ್ರಯವಾಗಬೇಕು ಎಂದರು.

ನಿಲಯಪಾಲಕ ಮೋಹನ್ ಕುಮಾರ್ ಮಾತನಾಡಿ, ವ್ಯಕ್ತಿಗೆ ನಿವೃತ್ತಿ ಎನ್ನುವುದು ಮನಸ್ಥಿತಿ. ಕೆಲವರು ನೌಕರಿಯಲ್ಲಿದ್ದೆ ನಿವೃತ್ತಿಯಾಗುತ್ತಾರೆ. ಮಾನಸಿಕವಾಗಿ ನಿವೃತ್ತರಾಗುತ್ತಾರೆ. ಇನ್ನು ಕೆಲವು ನಿವೃತ್ತ ನೌಕರರು ಇತರರಿಗೆ ಮಾರ್ಗದರ್ಶನ ಮಾಡಿದ್ದಾರೆ. ಈಗಲೂ ಕ್ರಿಯಾಶೀಲರಾಗಿದ್ದರು ಮಾನಸಿಕವಾಗಿ ನಿವೃತ್ತರಾಗದವರು ಜೀವನದಲ್ಲಿ ಎಂದೂ ನಿವೃತ್ತ ರಾಗುವುದಿಲ್ಲ. ಸಮಾಜದ ಅಭಿವೃದ್ಧಿಗೆ ನಿವೃತ್ತ ನೌಕರರು ಕೊಡುಗೆ ನೀಡಬಹುದು. ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಚಿಂತಿಸಿ ಆಶ್ರಯ ನೀಡುವ ಆಲದಮರವಾಗಬೇಕು ಎಂದರು.

ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ಚಂದ್ರಶೇಖರ್ ಮಾತನಾಡಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ದಮಯಂತಿ, ನಿಲಯ ಮೇಲ್ವಿಚಾರಕರಾದ ಬಿ.ಟಿ. ಮಹದೇವ್, ಮೋಹನ್ ಸುಶೀಲ ಮೊದಲಾದವರು ಇದ್ದರು.

Share this article