ದೋಟಿಹಾಳ ಸೇತುವೆ ಶಿಥಿಲ, ಸಂಚಾರಕ್ಕೆ ಭಯ

KannadaprabhaNewsNetwork |  
Published : Jul 22, 2024, 01:16 AM IST
ಪೋಟೊ21ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳ (ನವನಗರದ) ಸೇತುವೆಯ ಮೇಲೆ ಹತ್ತಾರು ಗುಂಡಿಗಳು ನಿರ್ಮಾಣವಾಗಿರುವದು.ಪೋಟೊ21ಕೆಎಸಟಿ1ಎ: ಕುಷ್ಟಗಿ ತಾಲೂಕಿನ ದೋಟಿಹಾಳ (ನವನಗರದ) ಸೇತುವೆಯ ಹಂಚಿನಲ್ಲಿ ವಾಹನಗಳ ಸಂಚಾರ ಮಾಡುತ್ತಿರುವ ಬೈಕ್ ಸವಾರರು. | Kannada Prabha

ಸಾರಾಂಶ

ತಾಲೂಕಿನ ದೋಟಿಹಾಳ ಪಕ್ಕದ ನವನಗರ ಬಳಿ ಇರುವ ಹಳ್ಳದ ಸೇತುವೆಯು ಶಿಥಿಲಗೊಂಡಿದೆ. ಈ ಸೇತುವೆಯ ಮೇಲೆ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ಜೀವಭಯ ಹುಟ್ಟಿಸಿವೆ.

ಸೇತುವೆಯ ಮೇಲೆ ಗುಂಡಿಗಳು, ಸೂಕ್ತ ಕ್ರಮಕ್ಕೆ ಆಗ್ರಹ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ದೋಟಿಹಾಳ ಪಕ್ಕದ ನವನಗರ ಬಳಿ ಇರುವ ಹಳ್ಳದ ಸೇತುವೆಯು ಶಿಥಿಲಗೊಂಡಿದೆ. ಈ ಸೇತುವೆಯ ಮೇಲೆ ಬೃಹದಾಕಾರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ಜೀವಭಯ ಹುಟ್ಟಿಸಿವೆ.

ಈ ಮುಖ್ಯರಸ್ತೆಯು ಕುಷ್ಟಗಿ ತಾಲೂಕಿನ ದೋಟಿಹಾಳದಿಂದ ಮುದೇನೂರು ಮೂಲಕ ತಾವರಗೇರಾ, ಲಿಂಗಸುಗೂರು ರಾಯಚೂರಿಗೆ ಸಂಪರ್ಕ ಕಲ್ಪಿಸುತ್ತದೆ. ಈ ನಡುವೆ 50ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ದೋಟಿಹಾಳದಿಂದ ಮುದೇನೂರು ವರೆಗೆ ರಸ್ತೆ ಅಭಿವೃದ್ಧಿಯಾಗಿದೆ.

ಡಬಲ್ ಗುಂಡಿಗೆ ಬೇಕು:

ಸೇತುವೆ ಮೇಲೆ ಹತ್ತಾರು ಗುಂಡಿಗಳು ಬಿದ್ದಿವೆ. ಸುಮಾರು ಎರಡು ಅಡಿಯಷ್ಟು ಆಳದ ಬೃಹತ್ ಗುಂಡಿಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಇಂತಹ ಸಮಸ್ಯೆ ಇಲ್ಲಿ ಕಾಡುತ್ತಿದೆ. ಈ ರಸ್ತೆಯಲ್ಲಿ ರಾತ್ರಿಯ ಹೊತ್ತು ಸಂಚಾರ ಮಾಡಬೇಕಾದರೆ ವಾಹನ ಸವಾರರಿಗೆ ಡಬಲ್‌ ಗುಂಡಿಗೆ ಇರಬೇಕು. ಇದು ಜಿಲ್ಲಾ ಮುಖ್ಯ ರಸ್ತೆಯಾಗಿರುವುದರಿಂದ ಹಲವಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದರೆ ಗುಂಡಿ ಯಾವುದೋ ರಸ್ತೆ ಯಾವುದೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮಳೆ ಸಂದರ್ಭದಲ್ಲಿ ಸೇತುವೆಯ ಒಂದು ಬದಿ ಕುಸಿದಿದೆ. ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಕಲಬುರ್ಗಿ ವಿಭಾಗದ ಪಿಡಬ್ಲ್ಯೂಡಿ ಮುಖ್ಯ ಅಭಿಯಂತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಬೇಡಿಕೆ. ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ಈ ಸೇತುವೆ ಮೇಲೆ ದೊಡ್ಡ ಅನಾಹುತವಾಗುವುದು ನಿಶ್ಚಿತ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ನಾಲ್ಕು ವರ್ಷಗಳ ಹಿಂದೆ ದೋಟಿಹಾಳದಿಂದ ಮುದೇನೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೋಟ್ಯಂತರ ರು. ಅನುದಾನದಲ್ಲಿ ಮಾಡಲಾಗಿತ್ತು. ಈ ವೇಳೆ ಕುಸಿದಿರುವ ಸೇತುವೆಯನ್ನು ಕಾಟಾಚಾರಕ್ಕೆ ಎಂಬಂತೆ ದುರಸ್ತಿ ಮಾಡಲಾಗಿತ್ತು ಎಂದು ಸಾರ್ವಜನಿಕರು ಹೇಳುತ್ತಾರೆ.

ದೋಟಿಹಾಳದ ನವನಗರದ ಹಳ್ಳದ ಸೇತುವೆಯ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಈ ವರ್ಷ ಮಂಜೂರಾಗಲಿದೆ. ಆದೇಶ ಬಂದ ತಕ್ಷಣ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಈಗ ಜಿಟಿ ಜಿಟಿ ಮಳೆ ಬರುತ್ತಿದ್ದು, ಮಳೆ ಬಿಡುವಿನ ಆನಂತರದಲ್ಲಿ ಮರಂ ಹಾಕಿ ತಾತ್ಕಾಲಿಕವಾಗಿ ರಸ್ತೆಯ ಕೆಲಸ ಮಾಡಲಾಗುವುದು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ಬಿ. ರಾಜಪ್ಪ.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ