ಮುಂಡರಗಿ: ಪತಿಯ ಕಾಯಕದಲ್ಲಿ ಸಹಾಯ ಮಾಡಿ ಬಂದು ಹಣದಿಂದ ದಾಸೋಹ ಮಾಡಿ ಗಂಡನಿಂದ ಮೆಚ್ಚುಗೆ ಪಡೆದ ಶರಣೆ ದುಗ್ಗಳೆ. ಕಾಯಕ, ದಾಸೋಹ ಮತ್ತು ದಾಂಪತ್ಯದ ಮೂಲಕ ವಚನಕಾರರು ಮತ್ತು ಸಮಾಜದಿಂದ ದುಗ್ಗಳೆ ದಂಪತಿಗಳು ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ತಿಳಿಸಿದರು.
ಬಸವಾದಿ ಶಿವಶರಣರು ತಮ್ಮ ಇಡೀ ಬದುಕಿನುದ್ದಕ್ಕೂ ನುಡಿದಂತೆ ನಡೆದರು. ದುಗ್ಗಳೆ ರೂಪ ಹಣದಿಂದ ಶ್ರೀಮಂತಳಲ್ಲದಿದ್ದರೂ ತಮ್ಮ ಗುಣಸ್ವಭಾವದ ಮೂಲಕ ಆಂತರಿಕ ಸಿರಿಯನ್ನು ಹೆಚ್ಚಿಸಿಕೊಂಡಿದ್ದರು ಎಂದರು.
ಶರಣೆ ದುಗ್ಗಳೆ ಕುರಿತು ಉಪನ್ಯಾಸ ನೀಡಿದ ಗಾಯಿತ್ರಿದೇವಿ ಹಿರೇಮಠ, 12ನೇ ಶತಮಾನದ ಶರಣ ಚಳವಳಿಯ ಪ್ರಮುಖ ಶರಣೆಯರಲ್ಲಿ ದುಗ್ಗಳೆಯೂ ಒಬ್ಬರು. ಇವರು ಶರಣರಾದ ದೇವರ ದಾಸಿಮಯ್ಯನವರ ಪತ್ನಿ. ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ ದಾಸೀಮಯ್ಯ ದುಗ್ಗಳೆ ದಂಪತಿಗಳು ದಾಸೋಹಕ್ಕೆ ಹೆಸರಾಗಿದ್ದರು ಎಂದರು.ಚೈತನ್ಯ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರು ತಮ್ಮ ವಚನಗಳ ಮೂಲಕ ಜನರಲ್ಲಿರುವ ಮೂಢನಂಬಿಕೆ, ಕಂದಾಚಾರಗಳಂತಹ ಅಂಧಕಾರವನ್ನು ತೊಳೆದರು. ದಾಸಿಮಯ್ಯ ದುಗ್ಗಳೆ ದಂಪತಿಗಳ ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಬಿ. ಹಿರೇಮಠ, ಡಾ. ನಿಂಗು ಸೊಲಗಿ, ಮಹೇಶ ಮೇಟಿ ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಹನುಮರಡ್ಡಿ ಇಟಗಿ, ವೆಂಕಟೇಶ ಗುಗ್ಗರಿ, ರಮೇಶಗೌಡ ಪಾಟೀಲ, ಕೃಷ್ಣಮೂರ್ತಿ ಸಾವುಕಾರ, ಎಂ.ಐ. ಮುಲ್ಲಾ, ಎಸ್.ವಿ. ಪಾಟೀಲ, ಶಂಭುಲಿಂಗನಗೌಡ ಮಠದ, ಎನ್.ವಿ. ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಸಾಪ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿ, ಎಂ.ಜಿ. ಗಚ್ಚಣ್ಣವರ ವಂದಿಸಿದರು.