ಧಾರವಾಡ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜೆಎಸ್ಸೆಸ್ ಸಂಸ್ಥೆಯನ್ನು ಬೆಳೆಸಿ, ಈ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದವರು ಡಾ. ಅಜಿತ ಪ್ರಸಾದ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಂತರ ಡಾ. ಅಜಿತ ಪ್ರಸಾದ ಅವರ ಅಭಿನಂದನಾ ಗ್ರಂಥ “ಸುಮೇರು” ಬಿಡುಗಡೆ ಮಾಡಿದ ಹೊರಟ್ಟಿ ಅವರು, ಸಂಸ್ಥೆ ನಡೆಸಲು ಧೈರ್ಯ, ಛಲ, ತಾಳ್ಮೆ, ಸಮಯಪ್ರಜ್ಞೆ ಮುಂತಾದ ಗುಣಗಳನ್ನು ಹೊಂದಿರಬೇಕು. ಡಾ. ಅಜಿತ ಪ್ರಸಾದರಲ್ಲಿ ನಾವು ಸ್ಪಷ್ಟವಾಗಿ ಅವುಗಳನ್ನು ಕಾಣಬಹುದು. ಹೀಗಾಗಿ, ವಜ್ರಕುಮಾರರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ವೀರೇಂದ್ರ ಹೆಗ್ಗಡೆ ಅವರು ಡಾ. ಅಜಿತ ಪ್ರಸಾದ ಅವರ ಕೈಗೆ ಹಸ್ತಾಂತರಿಸಿದರು. ಅವರ ಆಶಯದಂತೆ ಸಂಸ್ಥೆಯನ್ನು ಡಾ. ಅಜಿತ ಪ್ರಸಾದ 53 ವರ್ಷಗಳ ದೀರ್ಘ ಕಾಲ ಮುನ್ನಡೆಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡುತ್ತಿದ್ದಾರೆ ಎಂದರು.
ಗ್ರಾಮ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಅರವಿಂದ ಬೆಲ್ಲದ, ಡಾ. ಅಜಿತ ಪ್ರಸಾದ ಕೇವಲ ಸಂಸ್ಥೆಗೆ ಮಾತ್ರ ಸೀಮಿತವಿರದೇ ಸಮಾಜದ ಪ್ರಗತಿಯಲ್ಲೂ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು.ಹು-ಧಾ ಮಹಾಪೌರರಾದ ಜ್ಯೋತಿ ಪಾಟೀಲ್, ಡಾ. ಅಜಿತ ಪ್ರಸಾದ ಅವರ ತಾಳ್ಮೆ ಮತ್ತು ದಕ್ಷತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕುವ ನಿಟ್ಟಿನಲ್ಲಿ ಅಜಿತ್ ಪ್ರಸಾದ ಅವರು ಕೇವಲ ಪಠ್ಯವಷ್ಟೆ ಅಲ್ಲದೇ, ಪಠ್ಯೇತರ ಚಟುವಟಿಕೆಗೂ ಮನ್ನಣೆ ನೀಡಿ ಅವರ ಶ್ರೇಯೋಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದರು.
ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಅಥಣಿಯ ಮೋಟಗಿ ಮಠದ ಚನ್ನಬಸವ ಸ್ವಾಮೀಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಕೃವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ್, ಶ್ರೀಕಾಂತ ಕೆಮ್ತೂರ, ಜೀವಂಧರಕುಮಾರ, ಚಂದ್ರಕಾಂತ ಬೆಲ್ಲದ ಇದ್ದರು. ಆರಂಭದಲ್ಲಿ ಜೆಎಸ್‌ಎಸ್ ಆವರಣದ ಮುಂಭಾಗದಿಂದ ಸನ್ನಿಧಿ ಕಲಾಕ್ಷೇತ್ರದ ವರೆಗೆ ಡಾ. ಅಜಿತ ಪ್ರಸಾದ ದಂಪತಿಯನ್ನು ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು.