ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ. ಚನ್ನಬಸವಣ್ಣ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ತ್ರೀ ಶೋಷಣೆ ವಿರುದ್ಧ ಡಾ. ವೀಣಾ ಅವರು ಬರೆದ ಪುಸ್ತಕಗಳು ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ದೇವದಾಸಿಯರ ಶ್ರೇಯೋಭಿವೃದ್ಧಿಗೆ ಕಾರ್ಯೋನ್ಮುಖನಾದೆನು. ಚನ್ನಬಸವಣ್ಣ ಕೇವಲ ಪ್ರಕಾಶಕರಷ್ಟೇ ಅಲ್ಲ, ಅವರು ಹಲವು ಸಂಘ-ಸಂಸ್ಥೆಗಳಿಗೆ ಆಶ್ರಯ ನೀಡಿದ ಮಹಾನ್ ವ್ಯಕ್ತಿ ಎಂದರು.
ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಪರ ಮಾತನಾಡಿದ ಸಾಮಾಜಿಕ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ, ಪ್ರಶಸ್ತಿ ಪುರಸ್ಕೃತ ಇಬ್ಬರು ಗಣ್ಯರು, ಉತ್ತಮ ವ್ಯಕ್ತಿತ್ವದ ಮಾದರಿಗಳು. ಸ್ತ್ರೀ ಪ್ರಜ್ಞೆ ಕುರಿತು ತಮ್ಮ ಕೃತಿಗಳ ಮೂಲಕ ಜಾಗೃತಿ ಮೂಡಿಸಿದ ವೀಣಾ ಶಾಂತೇಶ್ವರ ವಿದ್ಯಾರ್ಥಿಗಳನ್ನು ಸೃಷ್ಟಿಸಿದರೆ, ಲೋಹಿಯಾ ಪ್ರಕಾಶನದ ಮೂಲಕ ಅತ್ಯಮೂಲ್ಯ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಚನ್ನಬಸವಣ್ಣ ಸಾಹಿತ್ಯ ದಾಸೋಹ ಮಾಡಿದರು ಎಂದರು.ಪ್ರಶಸ್ತಿ ಪುರಸ್ಕೃತ ಡಾ. ವೀಣಾ ಶಾಂತೇಶ್ವರ ಮಾತನಾಡಿ, ವೈಚಾರಿಕ ಉದಾರತೆ ಗುರುಲಿಂಗ ಕಾಪಸೆ ಅವರ ದೊಡ್ಡ ಗುಣ. ಸದಾ ಮಹಿಳೆಯರನ್ನು ಪ್ರೋತ್ಸಾಹಿಸುತ್ತ, ಸಾಧನೆಗೆ ಪ್ರೇರೇಪಿಸುತ್ತಿದ್ದರು. ಕಾಪಸೆ ಅವರು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕಡ್ಡಾಯ ಎಂದು ಹೇಳುವುದರೊಂದಿಗೆ ಎಲ್ಲ ಭಾಷೆಗಳನ್ನೂ ಅಪ್ಪಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಜೀವನದುದ್ದಕ್ಕೂ ಶಾಂತಿ ಮಂತ್ರವನ್ನೇ ಅವರು ಪ್ರತಿಪಾದಿಸಿದರು ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೀರಣ್ಣ ರಾಜೂರ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.