ಎಲ್ಲರಿಗೂ ಶಿಕ್ಷಣ ಹಕ್ಕು ಕೊಟ್ಟವರು ಡಾ.ಅಂಬೇಡ್ಕರ್‌

KannadaprabhaNewsNetwork |  
Published : Jun 21, 2025, 12:49 AM IST
20ಕೆಡಿವಿಜಿ1-ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾದ ಬಾಬಾ ಸಾಹೇಬರ ಬರಹಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅರಿವೇ ಅಂಬೇಡ್ಕರ್ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಖಾಸಗೀಕರಣ, ಕಾರ್ಪೋರೇಟ್ ಹಿಡಿತದಿಂದ ಶಿಕ್ಷಣವು ಬಂಡವಾಳಶಾಹಿಗಳ ಪರ ಕೇಂದ್ರೀಕೃತವಾಗಿದೆ. ದೇಶದ ಸಮಗ್ರ ಪ್ರಗತಿಗೆ ತೊಡಕಾಗುವ ಜೊತೆಗೆ ಅಂಬೇಡ್ಕರ್‌ ಕನಸಿದ್ದ ಸಮಸಮಾಜ ಆಶಯಕ್ಕೂ ತೊಡಕಾಗಿದೆ ಎಂದು ಲೇಖಕ, ಸಾಮಾಜಿಕ ಚಿಂತಕ ವಿ.ಎಲ್. ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

- ಅರಿವೇ ಅಂಬೇಡ್ಕರ್‌ ಕೃತಿ ಬಿಡುಗಡೆ- ಸಂವಾದದಲ್ಲಿ ಲೇಖಕ ನರಸಿಂಹಮೂರ್ತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಖಾಸಗೀಕರಣ, ಕಾರ್ಪೋರೇಟ್ ಹಿಡಿತದಿಂದ ಶಿಕ್ಷಣವು ಬಂಡವಾಳಶಾಹಿಗಳ ಪರ ಕೇಂದ್ರೀಕೃತವಾಗಿದೆ. ದೇಶದ ಸಮಗ್ರ ಪ್ರಗತಿಗೆ ತೊಡಕಾಗುವ ಜೊತೆಗೆ ಅಂಬೇಡ್ಕರ್‌ ಕನಸಿದ್ದ ಸಮಸಮಾಜ ಆಶಯಕ್ಕೂ ತೊಡಕಾಗಿದೆ ಎಂದು ಲೇಖಕ, ಸಾಮಾಜಿಕ ಚಿಂತಕ ವಿ.ಎಲ್. ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ತೋಳಹುಣಸೆ ಸಮೀಪದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಇಂಗ್ಲಿಷ್ ಅಧ್ಯಯನ ವಿಭಾಗ, ಮಾನವ ಬಂಧುತ್ವ ವೇದಿಕೆ- ಕರ್ನಾಟಕ ಹಾಗೂ ಈದಿನ ಡಾಟ್‌ ಕಾಂ ಹಮ್ಮಿಕೊಂಡಿದ್ದ ಅರಿವೇ ಅಂಬೇಡ್ಕರ್‌ ಕೃತಿ ಬಿಡುಗಡೆ ಹಾಗೂ ಬಾಬಾ ಸಾಹೇಬರ ಬರಹಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಶಿಕ್ಷಣ ನೀಡಿದರೂ ಅದು ಮುಖ್ಯವಾಗಿ ಜಮೀನ್ದಾರರು, ಅಧಿಕಾರಿಗಳ ಮಕ್ಕಳಿಗಷ್ಟೇ ಸೀಮಿತವಾಗಿತ್ತು. ಅಂಬೇಡ್ಕರ್ ದೃಷ್ಟಿಯಲ್ಲಿ ಪ್ರತಿ ವ್ಯಕ್ತಿಗೂ, ಎಲ್ಲ ವರ್ಗದವರಿಗೂ ಶಿಕ್ಷಣ ಲಭ್ಯ ಆಗಬೇಕು ಎಂಬುದಾಗಿತ್ತು. ಶಿಕ್ಷಣದಲ್ಲಿ ಬಾಬಾ ಸಾಹೇಬರ ಕುರಿತ ಪಠ್ಯಕ್ರಮ ಕಡ್ಡಾಯ ಆಗಬೇಕು. ಸಂವಿಧಾನದಲ್ಲಿ ಶಿಕ್ಷಣ ಎಲ್ಲರ ಹಕ್ಕಾಗಿ ರೂಪಿಸಿದವರು ಬಾಬಾ ಸಾಹೇಬ್‌ ಎಂದರು.

ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಶಕ್ತಿ. ನಾವು ಇಂದು ಉತ್ತಮವಾಗಿ ಬದುಕುತ್ತಿರುವುದಕ್ಕೆ ಮಾನವತಾವಾದಿ ಅಂಬೇಡ್ಕರ್‌ ಕಾರಣ. ಬಾಬಾ ಸಾಹೇಬರ ತತ್ವ, ಸಿದ್ಧಾಂತ, ಆದರ್ಶಗಳನ್ನು ಅನುಸರಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ, ವಕೀಲರಾದ ರಾಜಲಕ್ಷ್ಮೀ ಅಂಕಲಗಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವು ಮಹಿಳೆಯರಿಗೆ ಸಮಾನತೆಯ ಹಕ್ಕು, ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ವಿವಿ ಕುಲ ಸಚಿವ ಶಬ್ಬೀರ್ ಬಾಷ ಗಂಟಿ, ಈದಿನ ಡಾಟ್ ಕಾಮ್ ಕೇಂದ್ರ ಸಂಯೋಜಕ ಅನಿಲಕುಮಾರ್ ಚಿಕ್ಕದಾಳವಟ್ಟ, ಜಿಲ್ಲಾ ವರದಿಗಾರ ವಿನಾಯಕ್ ಚಿಕ್ಕಂದವಾಡ, ಇಂಗ್ಲಿಷ್ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಎಸ್. ಯಜ್ಞಶ್ರೀ, ಎಚ್.ಆರ್‌. ಮದಕರಿ ನಾಯಕ, ವಿಭಾಗ ಸಂಯೋಜನಾಧಿಕಾರಿ ಡಾ.ಫಕ್ಕಿರೇಶ ಹಳ್ಳಳ್ಳಿ, ಸಹಾಯಕ ಪ್ರಾಧ್ಯಾಪಕ ಡಾ. ರವಿಕುಮಾರ.ಎಸ್.ಕುಂಬಾರ, ತುಮಕೂರಿನ ಚಂದನ್ ಇತರರು ಇದ್ದರು.

- - -

(ಬಾಕ್ಸ್‌) * ಆರಾಧನೆ ಬದಲು ತತ್ವ ಅರ್ಥೈಸಿಕೊಳ್ಳಬೇಕುಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಅಂಬೇಡ್ಕರ್‌ ಅವರನ್ನು ಆರಾಧಿಸುವುದಕ್ಕಿಂತ ಆಶಯಗಳನ್ನರಿತು, ತತ್ವ ಅರ್ಥ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಕೇವಲ ಒಂದು ವರ್ಗ, ಜಾತಿಗೆ ಸೀಮಿತವಾದವರಲ್ಲ. ಸಮಾಜದ ಎಲ್ಲ ವರ್ಗಗಳ ನಾಯಕರು. ಭಾರತದ ಅರ್ಥ ವ್ಯವಸ್ಥೆಯಲ್ಲಿ ಮಾತ್ರವಲ್ಲದೇ, ಸಾಮಾಜಿಕ, ರಾಜಕೀಯ ಸಮಾನತೆಗೆ ಅಂಬೇಡ್ಕರ್‌ ಹೇಗೆ ಪ್ರಸ್ತುತರಾಗುತ್ತಾರೆ ಎಂಬುದನ್ನು ವಿ.ವಿ.ಗಳು, ಶಿಕ್ಷಣ ತಜ್ಞರು ತಿಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

- - -

-20ಕೆಡಿವಿಜಿ1.ಜೆಪಿಜಿ:

ದಾವಣಗೆರೆ ವಿ.ವಿ.ಯಲ್ಲಿ ಶುಕ್ರವಾರ ಬಾಬಾ ಸಾಹೇಬರ ಬರಹಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅರಿವೇ ಅಂಬೇಡ್ಕರ್ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!