ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಗುರುವಾರ ಕುರಿಗಾಹಿ ಗಿರಿಜನ ಮಹಿಳೆಯನ್ನು ಬಲಿ ಪಡೆದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದರು. ಗುರುವಾರ ಸಂಜೆಯಿಂದಲೇ ದೇಶಿಪುರ ಕಾಲೋನಿಯಲ್ಲಿ ಬೀಡು ಬಿಟ್ಟಿದ್ದ ಎಸ್ ಟಿಪಿಎಫ್ 12, ಎಲಿಫೆಂಟ್ ಟಾಸ್ಕ್ ಫೋರ್ಸ್ 3, ಕ್ಯಾಂಪ್ ವಾಚರ್ 10, ಡಿಆರ್ ಎಫ್ ಒ 2, ಗಾರ್ಡ್ಸ್ 2, ಇಬ್ಬರು ವಾಚರ್ ಗಳು ಎಸಿಎಫ್ ಸುರೇಶ್ ಹಾಗು ಆರ್ ಎಫ್ ಒ ಕೆ.ಪಿ.ಸತೀಶ್ ಕುಮಾರ್ ನೇತೃತ್ವದಲ್ಲಿ 4 ವಾಹನಗಳನ್ನು ಬಳಸಿಕೊಂಡು ಎರಡು ತಂಡಗಳಲ್ಲಿ ಶುಕ್ರವಾರ ಬೆಳಗ್ಗೆ ಗಸ್ತು ತಿರುಗುವ ಮತ್ತು ಲದ್ದಿ ಹಾಕಿರುವ, ಹೆಜ್ಜೆ ಗುರುತು ಮೂಡಿರುವ ಬಗ್ಗೆ ಪರಿಶೀಲಿಸುವ ಮೂಲಕ ಹುಲಿಯ ಚಲನವಲನ ಗಮನಿಸಿದರು. ಎರಡು ಭಾರಿ ಡ್ರೋಣ್ ಹಾರಿಸುವ ಮೂಲಕ ಹದ್ದಿನ ಕಣ್ಣಿಟ್ಟಿದ್ದರು. ಆದರೆ ಎಲ್ಲೂ ಹುಲಿಯ ಸುಳಿವು ಸಿಗಲಿಲ್ಲ. ಬೇಟೆಯಾಡಿದ ಜಾಗಕ್ಕೆ ಮತ್ತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ದಾಳಿ ನಡೆಸಿದ ಜಾಗದಲ್ಲಿ ಬೋನ್ ಇರಿಸಿ ಬಲಿ ಪ್ರಾಣಿ ಕಟ್ಟಲಾಗಿದೆ. ಅಲ್ಲದೇ ಟ್ರ್ಯಾಪಿಂಗ್ ಸಲುವಾಗಿ 10 ಕ್ಯಾಮರಾಗಳನ್ನು ಆಯಕಟ್ಟಿನ ಜಾಗಗಳಲ್ಲಿ ಕಟ್ಟಲಾಗಿದೆ.
ಹುಲಿ ದಾಳಿ ನಡೆಸಿದ ಪ್ರದೇಶದ ಬದಲು ಬೇರೆ ಕಡೆಯಲ್ಲಿ ಜಾನುವಾರು ಮೇಯಿಸುವಂತೆ ಸುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ಟಾಂಟಾಂ ಹಾಕಿಸುವ ಮೂಲಕ ತಿಳಿವಳಿಕೆ ನೀಡಲಾಗಿದೆ.-ಸುರೇಶ್, ಎಸಿಎಫ್, ಗುಂಡ್ಲುಪೇಟೆ