2 ವರ್ಷಗಳಿಂದ 1 ರು. ಕೂಡ ಅನುದಾನ ಬಂದಿಲ್ಲ: ಶಾಸಕ ವೇದವ್ಯಾಸ್‌ ಕಾಮತ್‌

KannadaprabhaNewsNetwork |  
Published : Jun 21, 2025, 12:49 AM IST
ಶಾಸಕ ವೇದವ್ಯಾಸ್‌ ಕಾಮತ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಯಾವುದೇ ಶಿಲಾನ್ಯಾಸ ನಡೆಸಿಲ್ಲ. ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಯಾವುದೇ ಶಿಲಾನ್ಯಾಸ ನಡೆಸಿಲ್ಲ. ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಥಾಪ್ರಕಾರ ಸಿಗುವ ತಲಾ 2 ಕೋಟಿ ರು.ಗಳ ಶಾಸಕರ ನಿಧಿಯನ್ನು ಹೊರತುಪಡಿಸಿದರೆ ಹೊಸ ಕಾಮಗಾರಿಗೆ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಇದು ಕರಾವಳಿಯ ಕಾಂಗ್ರೆಸ್‌ ಶಾಸಕರನ್ನೂ ಹೊರತಾಗಿಲ್ಲ. ಕಳೆದ ವರ್ಷದ ಪ್ರಾಕೃತಿಕ ವಿಕೋಪದ ಪರಿಹಾರ ಮೊತ್ತ ಇನ್ನೂ ಪಾವತಿಯಾಗಿಲ್ಲ. ಕರಾವಳಿ, ಮಲೆನಾಡಿಗೆ ಆಗಿನ ಬಿಜೆಪಿ ಸರ್ಕಾರ ತಡೆಗೋಡೆ ಹಾನಿಗೆ ಪರಿಹಾರ ನೀಡಿತ್ತು. ಕಾಂಗ್ರೆಸ್‌ ಸರ್ಕಾರದ ತಡೆಗೋಡೆ ಹಾನಿಗೆ ಎನ್‌ಡಿಆರ್‌ಎಫ್‌ ನಿಯಮ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಅಲ್ಲದೆ ಮನೆ ಹಾನಿ, ಮಳೆ ಹಾನಿ ಪರಿಹಾರ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಿ ಸಂತ್ರಸ್ತರಿಗೆ ಅನ್ಯಾಯ ಎಸಗುತ್ತಿದೆ ಎಂದರು.

ಮೂಡಾ ಕೆಲಸಕ್ಕೆ ಬೆಂಗಳೂರಲ್ಲಿ ಅರ್ಜಿ ಸಲ್ಲಿಸಬೇಕು!:

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ಯಾವುದೇ ಕೆಲಸ ಆಗಬೇಕಾದರೆ ಬೆಂಗಳೂರಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಸಭೆಗೆ ಅಜೆಂಡಾ ಆಗಿ ಇರಿಸಬೇಕಾದ ಪ್ರಮೇಯ ಬಂದಿದೆ. ಈ ಹಿಂದೆ ಇಲ್ಲಿ ಅರ್ಜಿ ಸಲ್ಲಿಸಿ, ಇಲ್ಲಿಂದಲೇ ಅರ್ಜಿ ವಿಲೇವಾರಿ ಮಾಡಬಹುದಿತ್ತು. ತೀರ್ಮಾನಗಳೆಲ್ಲವೂ ಬೆಂಗಳೂರಿನಲ್ಲೇ ಆಗಬೇಕಾದರೆ ಇಲ್ಲಿ ಮೂಡಾ ಹೆಸರಿಗೆ ಮಾತ್ರವೇ ಇರುವುದಾ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದರು.

ಮಂಗಳೂರು ಜೈಲಿನಲ್ಲಿ ಜಾಮರ್‌ನಿಂದಾಗಿ ಸಾಮಾನ್ಯರಿಗೆ, ಸಂಘಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಜೈಲಿನ ಒಳಗೆ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಿದೆ, ಆದರೆ ಹೊರಗೆ ಜಾಮರ್‌ ತೊಂದರೆ ನೀಡುತ್ತಿದೆ. ಒಟ್ಟಿನಲ್ಲಿ ಮಂಗಳೂರು ಅವ್ಯವಸ್ಥೆಯ ಗೂಡು ಆಗಿ ಪರಿಣಮಿಸಿದೆ ಎಂದರು.

ಕಲೆಕ್ಷನ್‌ ಕೇಂದ್ರ:

ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಮಾತನಾಡಿ, ಮಹಾನಗರ ಪಾಲಿಕೆ ಹಾಗೂ ಮೂಡಾ ಕಲೆಕ್ಷನ್‌ ಕೇಂದ್ರವಾಗಿ ಅವ್ಯವಸ್ಥೆಯ ಆಗರವಾಗಿದೆ. ಮೂಡಾದಲ್ಲಿ ಅರ್ಜಿ ಸಲ್ಲಿಸಿದರೆ ಅನುಮತಿಗೆ ಬೆಂಗಳೂರಿಗೆ ಯಾಕೆ ತೆರಳಬೇಕು ಎಂಬುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಾಕೃತಿಕ ತೊಂದರೆ ಸೇರಿದಂತೆ ಯಾವುದೇ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ಸೇರಿಸಿ ಸಭೆ ನಡೆಸುತ್ತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಜೂ.23ರಂದು ಬಿಜೆಪಿ ನಗರ ಪಾಲಿಕೆ ಎಂದು ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ