ಡಾ. ಅಂಬೇಡ್ಕರ ಸಮಾನತೆಯ ಹರಿಕಾರ: ಶಾಸಕ ಪಠಾಣ

KannadaprabhaNewsNetwork | Published : Apr 15, 2025 12:56 AM

ಸಾರಾಂಶ

ಡಾ. ಅಂಬೇಡ್ಕರ ಅವರು ತಮ್ಮ ಬಾಲ್ಯದ ಜೀವನದುದ್ದಕ್ಕೂ ಅನುಭವಿಸಿದ ಜಾತಿಭೇದ, ತಾರತಮ್ಯವನ್ನು ಹೋಗಲಾಡಿಸಲು ೧೨ನೇ ಶತಮಾನದ ಬಸವಣ್ಣನವರ ಕಲ್ಪನೆಯಂತೆ ಸರ್ವರಿಗೂ ಸಮಾನತೆಯ ಸಂವಿಧಾನವನ್ನು ದೇಶಕ್ಕೆ ಕೊಟ್ಟು ಸಮಾನತೆಯ ಹರಿಕಾರರಾಗಿದ್ದಾರೆ.

ಶಿಗ್ಗಾಂವಿ: ದೇಶ ಸ್ವತಂತ್ರವಾಗಿ ೭೫ ವರ್ಷ ಗತಿಸಿದರೂ ಮೇಲ್ವರ್ಗ, ಕೆಳವರ್ಗ ಎಂಬ ಭೇದಭಾವದೊಂದಿಗೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಡಾ. ಅಂಬೇಡ್ಕರ್ ಅವರು ಕೇವಲ ಒಂದೇ ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಎಂದು ಶಾಸಕ ಯಾಸಿರಖಾನ್ ಪಠಾಣ ತಿಳಿಸಿದರು.ಪಟ್ಟಣದ ಸಂತೆ ಮೈದಾನದಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಒಕ್ಕೂಟಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ಅಂಬೇಡ್ಕರ ಅವರು ತಮ್ಮ ಬಾಲ್ಯದ ಜೀವನದುದ್ದಕ್ಕೂ ಅನುಭವಿಸಿದ ಜಾತಿಭೇದ, ತಾರತಮ್ಯವನ್ನು ಹೋಗಲಾಡಿಸಲು ೧೨ನೇ ಶತಮಾನದ ಬಸವಣ್ಣನವರ ಕಲ್ಪನೆಯಂತೆ ಸರ್ವರಿಗೂ ಸಮಾನತೆಯ ಸಂವಿಧಾನವನ್ನು ದೇಶಕ್ಕೆ ಕೊಟ್ಟು ಸಮಾನತೆಯ ಹರಿಕಾರರಾಗಿದ್ದಾರೆ. ಇಂತಹ ಮಹನೀಯರ ಜನ್ಮದಿನವನ್ನು ಪ್ರತಿಯೊಬ್ಬರೂ ಸಮಾನತೆಯೊಂದಿಗೆ ಸಂಭ್ರಮದಿಂದ ಆಚರಿಸಬೇಕು ಎಂದರು.ಸಮಾಜದ ಪ್ರತಿಯೊಬ್ಬರಲ್ಲೂ ಮೇಲು- ಕೀಳು ಎಂಬ ಭೇದಭಾವ ಸಂಪೂರ್ಣವಾಗಿ ನಿರ್ಮೂಲನೆಯಾದಾಗ ಮಾತ್ರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಲು ಸಾಧ್ಯವೆಂದರುಡಾ. ಶ್ರೀಶೈಲ ಹುದ್ದಾರ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು, ಡಾ. ನಾಗರಾಜ ದ್ಯಾಮನಕೊಪ್ಪ ಅವರು ಡಾ. ಬಾಬು ಜಗಜೀವನರಾಮ ಅವರ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸಂಗನಬಸವ ಸ್ವಾಮಿಗಳು ವಹಿಸಿದ್ದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಸಿದ್ಧಾರ್ಥ ಪಾಟೀಲ, ತಹಸೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್., ತಾಪಂ ಮುಖ್ಯಧಿಕಾರಿ ಕುಮಾರ ಮಣ್ಣವಡ್ಡರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೊಶ, ಬಿಇಒ ಎಂ.ಬಿ. ಅಂಬಿಗರ, ನೌಕರರ ಸಂಘದ ತಾಲೂಕಾಧ್ಯಕ್ಷ ಅರುಣ ಹುಡೆದಗೌಡ್ರ, ಎಸ್.ಎಫ್‌. ಮಣಕಟ್ಟಿ, ಗುಡ್ಡಪ್ಪ ಜಲದಿ, ಡಾ. ಮಲ್ಲೇಶಪ್ಪ ಹರಿಜನ, ಅಶೋಕ ಕಾಳೆ, ಮಂಜುನಾಥ ಬ್ಯಾಹಟ್ಟಿ, ಅರ್ಜುನ ಹಂಚಿನಮನಿ, ಸುಧೀರ ಲಮಾಣಿ, ಗೌಸಖಾನ ಮುನಸಿ, ಜಾಪರಖಾನ ಪಠಾಣ, ಅಣ್ಣಪ್ಪ ಲಮಾಣಿ, ನಿಂಗಪ್ಪ ಹರಿಜನ, ಪರಶುರಾಮ ಕಾಳೆ, ಕರೆಪ್ಪ ಕಟ್ಟಿಮನಿ, ಹನಮಂತಪ್ಪ ಬಂಡಿವಡ್ಡರ ಸೇರಿದಂತೆ ತಾಲೂಕಾಡಳಿತದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಾಕಾರವಾಗದ ಅಂಬೇಡ್ಕರ ಆಶಯ: ಬಸವರಾಜ ಎಸ್.

ಹಾವೇರಿ: ಸ್ಥಳೀಯ ಶಿವಾಜಿ ನಗರದ ಎಸ್‌ಎಫ್‌ಐ ಕಚೇರಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನವನ್ನು ಆಚರಿಸಲಾಯಿತು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಜನಪ್ರತಿನಿಧಿಗಳು ಬಾಬಾ ಸಾಹೇಬರು ಶೋಷಿತರಿಗೆ ನೀಡಿದ ಮೀಸಲಾತಿಯ ವಿಚಾರದಲ್ಲಿ ಕಿತ್ತಾಡುತ್ತಿದ್ದಾರೆ ಹೊರತು ಅವರ ಆಶಯಗಳನ್ನು ಸಾಕಾರಗೊಳಿಸುತ್ತಿಲ್ಲ. ಮೀಸಲಾತಿ ಹಗ್ಗಜಗ್ಗಾಟ ಕೈಬಿಟ್ಟು ವಿದ್ಯಾರ್ಥಿ- ಯುವಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಬೇಕು. ಎಲ್ಲ ಭಾರತೀಯರು ಬದುಕು ನಡೆಸುವ ಅತ್ಯುತ್ತಮ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ವಕೀಲರಾಗಿದ್ದರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿ. ಕಟ್ಟಕಡೆಯ ಜನರಿಗೂ ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ, ಬದುಕುವ ಹಕ್ಕಿನ ಹಿಂದೆ ಬಾಬಾ ಸಾಹೇಬರ ಶ್ರಮವಿದೆ ಎಂದರು.

ಬಾಬಾ ಸಾಹೇಬರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ- ದಲಿತರು, ಹಿಂದುಳಿದವರು, ಶೋಷಿತರಿಗಾಗಿ ಹೋರಾಡಿದರು ಎಂದರು.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಯಮ್ಮಿಯವರ, ಜಿಲ್ಲಾ ಸಹ ಕಾರ್ಯದರ್ಶಿ ಕೃಷ್ಣ ನಾಯಕ, ರೇವಣಸಿದ್ದು ವಿ., ದಯಾನಂದ, ಧನುಷ್ ದೊಡ್ಡಮನಿ, ತೇಜಸ್ ಎನ್.ಡಿ., ಆಧ್ಯಾ ಎನ್.ಆರ್., ಮೈನು ಎಲಿಬುಡ್ಡಿ, ಅಭಿ ಬಂಡಿವಡ್ಡರ, ಅನುಪಮ ಬಿ., ಸುನೀಲ್‌ಕುಮಾರ್ ಎಲ್., ವಸಂತ ವಿ., ಸುನಿಲ್ ಲಮಾಣಿ, ಕೃಷ್ಣ ಕೆ., ಮಂಜು ಎಚ್., ಜಯೇಶ್, ವಿಜಯ ಲಮಾಣಿ, ಆನಂದ ಎಲ್., ಗದಿಗೆಪ್ಪ ಹರಿಜನ, ಕಾರ್ತಿಕ ಕಮ್ಮಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Share this article