ಶರಣು ಸೊಲಗಿ
ಪ್ರಸ್ತುತ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಆಯ್ಕೆಯಾಗಿದ್ದಾರೆ.
ಅನ್ನದಾನೀಶ್ವರ ಮಹಾಶಿವಯೋಗಿಗಳು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದ ಹಿರೇಮಠದ ವೀರಭದ್ರಯ್ಯ ಹಾಗೂ ಬಸವಮ್ಮ ದಂಪತಿಯ ತೃತೀಯ ಪುತ್ರರಾಗಿ 1942ರ ಮೇ 4ರಂದು ಜನಿಸಿದರು. 1969ರ ಜ. 31ರಂದು ಪೂಜ್ಯರು ಮುಂಡರಗಿ ಅನ್ನದಾನೀಶ್ವರ ಮಠದ 10ನೇ ಪೀಠಾಧೀಶ್ವರರಾಗಿ ಅಧಿಕಾರ ಸ್ವೀಕರಿಸಿದರು. ಮುಂಡರಗಿ ಅನ್ನದಾನೀಶ್ವರ ಮಠವು ಅವಿರಳಜ್ಞಾನಿ ಶ್ರೀ ಚೆನ್ನಬಸವಣ್ಣನವರ ಬಳಿವಿಡಿದು ಬಂದ ಮಠವಾಗಿದೆ. ಶ್ರೀಗಳು ಪೀಠಾಧಿಪತಿಯಾದ ನಂತರ ಮುಂಡರಗಿ ಪಟ್ಟಣವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಜಿಯಿಂದ ಪಿಜಿ ಹಂತದವರೆಗೆ ಒಟ್ಟು 32ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅಕ್ಷರ ಕ್ರಾಂತಿ ಮಾಡಿದ್ದಾರೆ.ಸಮಾಜದ ಹಿತದೃಷ್ಟಿಯಿಂದ ಶ್ರೀಗಳು ಶ್ರೀಮಠದಿಂದ ಪುರಸಭೆ, ತಾಲೂಕಾ ಆಸ್ಪತ್ರೆ, ತಾಲೂಕಾ ಕ್ರೀಡಾಂಗಣ, ರುದ್ರಭೂಮಿ, ಕನ್ನಡ ಸಾಹಿತ್ಯ ಭವನ, ವಿಜ್ಞಾನ ಭವನ ಸೇರಿದಂತೆ ಅನೇಕ ಶಾಲಾ ಕಟ್ಟಡಗಳಿಗೆ, ವಿವಿಧ ಸರ್ಕಾರಿ ಕಟ್ಟಡಗಳಿಗೆ ನೂರಾರು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಪ್ರತಿವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಾನುವಾರುಗಳ ಜಾತ್ರೆ, ಕೃಷಿಮೇಳ, ಫಲಪುಷ್ಪ ಪ್ರದರ್ಶನ, ಯೋಗ ಶಿಬಿರಗಳು, ಆರೋಗ್ಯ ಶಿಬಿರದ ಮೂಲಕ ರಕ್ತದಾನ, ನೇತ್ರದಾನ, ಉಚಿತ ಕನ್ನಡಕ ವಿತರಣೆ ಸೇರಿದಂತೆ ಅನೇಕ ಜನೋಪಯೋಗ ಕಾರ್ಯ ಮಾಡುತ್ತಿದ್ದಾರೆ. ತುಂಗಭದ್ರಾ ಹಾಗೂ ಮಲಪ್ರಭಾ ನದಿಗಳಿಂದ ಉಂಟಾದ ನೆರೆ ಹಾವಳಿಯ ಸಂದರ್ಭಗಳಲ್ಲಿ ನೇರವಿನ ಹಸ್ತ ಚಾಚಿದ್ದಾರೆ. ಕಪ್ಪತ್ತಗುಡ್ಡ ಸಸ್ಯ ಸಂಪತ್ತಿನ ಸಂರಕ್ಷಣೆಗೆ ಹೋರಾಡಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, ಬನಾರಸ್ ವಿಶ್ವವಿದ್ಯಾಲಯದಿಂದ ವೇದಾಂತ ಶಾಸ್ತ್ರಿ ಪ್ರಶಸ್ತಿ ,1998ರಲ್ಲಿ ಧಾರವಾಡದ ಮುರುಘಾಮಠವು ಧರ್ಮಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಿದೆ. 2005ರಲ್ಲಿ ಧಾರವಾಡ ಕರ್ನಾಟಕ ವಿವಿ ಗೌರವ ಡಿಲಿಟ್(ಡಾ) ಪದವಿ ನೀಡಿ ಗೌರವಿಸಿದೆ. 2013ರಲ್ಲಿ ಹಂಪಿಯ ಕನ್ನಡ ವಿವಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ. ಕವಿ, ವಿಮರ್ಶಕ, ಸಂಪಾದಕ, ವ್ಯಾಖ್ಯಾನಕಾರ, ವಚನಕಾರ, ಚುಟುಕು ಸಾಹಿತಿಗಳಾಗಿ ಹಲವು ರಂಗಗಳಲ್ಲಿ ಛಾಪು ಮೂಡಿಸಿದ್ದಾರೆ. ಇವರ 160ಕ್ಕೂ ಹೆಚ್ಚು ಕೃತಿಗಳು 19 ಸಂಪುಟಗಳಲ್ಲಿ ಪ್ರಕಟಿಸಿ ಸಾರಸ್ಪತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಮಠದಿಂದ 270 ಕ್ಕೂ ಹೆಚ್ಚು ವಿವಿಧ ಲೇಖಕರ ಕೃತಿಗಳನ್ನು ಪ್ರಕಟಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಡರಗಿ ತಾಲೂಕಾ ಪತ್ರಕರ್ತರ ಪ್ರಶಸ್ತಿಗೆ, ಶಿಕ್ಷಕರ ಪ್ರಶಸ್ತಿಗಾಗಿ, ಮಾಜಿ ಸೈನಿಕರಿಗೆ ಪ್ರಶಸ್ತಿಗಾಗಿ ತಲಾ 1 ಲಕ್ಷ ನೀಡಿದ್ದಾರೆ. ಹೀಗೆ ವಿವಿಧ ವಿವಿಗಳಿಗೆ ಚಿನ್ನದ ಪದಕ ನೀಡಲು ಧನ ಸಹಾಯ ನೀಡಿದ್ದಾರೆ. ಇಷ್ಟೆಲ್ಲ ಸೇವೆ ಮಾಡಿದ ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ ರಾಜ್ಯ ಸರ್ಕಾರ ಇದೇ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಮುಂಡರಗಿ ನಾಡಿನಲ್ಲಿ ಅನ್ನದಾನ, ಅಕ್ಷರ ದಾನ ನೀಡುವ ಮೂಲಕ ಅನ್ನದಾನೀಶ್ವರ ಮಹಾಶಿವಯೋಗಿಗಳು ಕಳೆದ 57 ವರ್ಷಗಳಿಂದ ಅನೇಕ ಸಮಾಜೋ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಮಠಮಾನ್ಯಗಳಿಗೆ ಸಾರ್ವಜನಿಕರಿಂದ ದಾನ ಕೇಳುವ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳಿಗೆ, ಸರ್ಕಾರಿ ಕಛೇರಿಗಳಿಗೆ ನೂರಾರು ಎಕರೆ ಬೆಲೆಬಾಳುವ ಜಮೀನು ದಾನ ಮಾಡಿದ ಕೀರ್ತಿ ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ ಸಲ್ಲುತ್ತದೆ. ಪೂಜ್ಯರ ಸಾಮಾಜಿಕ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ.