
ವಿಜಯಪುರ: ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ನಡೆದ 2ನೇ ಆಯುರ್ವೇದ ವಿಶ್ವಸಮ್ಮೇಳನದಲ್ಲಿ ಡಾ.ಅಶೋಕ ಪಾಟೀಲ ಅವರಿಗೆ ಆರ್ಯುರ್ವೇದ ವಿಶ್ವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಆಯುರ್ವೇದ ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಶಾಂತಿ ಆಯುರ್ವೇದ ಕೇಂದ್ರದ ಖ್ಯಾತ ವೈದ್ಯ ಡಾ.ಗಿರಿಧರ ಕಜೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಇತರೆ ಆಯುರ್ವೇದ ಸಾಧಕ ವೈದ್ಯರಿಗೂ ಪ್ರಶಸ್ತಿ ಕೊಡಮಾಡಲಾಯಿತು. 19 ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಿರುವ ಅವರು ಅನೇಕ ಸಂಶೋಧನೆಗಳನ್ನು ಕೈಗೊಂಡು 35ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೇ, ನಾನಾ ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಸಂಶೋಧನ ಪರಿಣಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪಿ.ಎಚ್.ಡಿ ಪದವಿದರರಿಗೆ ಮಾರ್ಗದರ್ಶಕರಾಗಿಯೂ ಅನುಭವ ಹೊಂದಿದ್ದಾರೆ. ಡಾ.ಅಶೋಕ ಪಾಟೀಲ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಸ್ಥೆಯ ಮುಖ್ಯ ಸಲಹೆಗಾರ ಡಾ.ಆರ್.ವಿ.ಕುಲಕರ್ಣಿ, ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ ಕಡ್ಲಿಮಟ್ಟಿ, ಕಾಲೇಜಿನ ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.