ಕನ್ನಡಪ್ರಭ ವಾರ್ತೆ ನಂಜನಗೂಡು
ಸಂವಿಧಾನದ ಕುರಿತು ಜಾಗೃತಿ ಮೂಡಿದಾಗ ಮಾತ್ರ ಅದರ ಮಹತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಲ್ಲಿ ಬೇರೂರುವಂತೆ ಮಾಡಲು ಸಾಧ್ಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಅಹಿಂದ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಒಳಮೀಸಲಾತಿ ಹಾಗೂ ಜಾತಿಗಣತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಉಳಿಸುವ ಹಾಗೂ ಅದನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಕುರಿತು ಆಳವಾದ ಚರ್ಚೆ, ಅಧ್ಯಯನಗಳು ಆಗಬೇಕು. ಜನರಲ್ಲಿ ಅರಿವು ಮೂಡಿಸುವ ಕೆಲಸವಾದಾಗ ಮಾತ್ರ ಸಂವಿಧಾನ ಮತ್ತಷ್ಟು ಪ್ರಖರವಾಗಿ ಜನಸಾಮಾನ್ಯರಲ್ಲಿ ಬೇರೂರುತ್ತದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ರಾಜ್ಯವ್ಯಾಪಿ ಅದರ ಮಹತ್ವವನ್ನು ಸಾರುವ ಕೆಲಸ ಮಾಡಿದೆ ಎಂದರು.ಆರ್. ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಚಾಮರಾಜನಗರ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಮೆಡಿಕಲ್ ಕಾಲೇಜು, ಆಸ್ಪತ್ರೆಗಳನ್ನು ಮಂಜೂರು ಮಾಡಿಸುವ ಮೂಲಕ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಿದ್ದರು. ಧ್ರುವನಾರಾಯಣ ಅವರ ದೂರದೃಷ್ಟಿ ಫಲವಾಗಿ ಚಾಮರಾಜನಗರದಲ್ಲೂ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಬಹುರಾಷ್ಟ್ರೀಯ ಕಂಪನಿಗಳು ಚಾಮರಾಜನಗರದತ್ತ ಮುಖ ಮಾಡುತ್ತಿದ್ದು, ಸ್ಥಳೀಯವಾಗಿ ಉದ್ಯೋಗವಕಾಶಗಳು ಹೆಚ್ಚಲು ಸಹಕಾರಿಯಾಗಿದೆ ಎಂದು ಹೇಳಿದರು.
ಹೈಕೋರ್ಟ್ ನ್ಯಾಯವಾದಿ ಎಚ್. ಮೋಹನ್ ಕುಮಾರ್ ಮಾತನಾಡಿ, ಪ. ಜಾತಿ, ಪಂಗಡ ಹಾಗೂ ಮುಸ್ಲಿಂರಿಗಿಂತ ಕಡಿಮೆ ಪ್ರಮಾಣದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು ಇದ್ದಾರೆ ಎಂಬ ಅಂಶ ಬೆಳಕಿಗೆ ಬರಲಿದೆ ಎಂಬ ಆತಂಕದಿಂದ ಜಾತಿಗಣತಿ ವರದಿ ಬಹಿರಂಗ ಪಡಿಸಲು ವಿರೋಧ ವ್ಯಕ್ತವಾಗುತ್ತಿದೆ. ಸಾಂಸ್ಕೃತಿಕವಾಗಿ ಒಂದಾಗಿರುವ ಸಮುದಾಯಗಳು ರಾಜಕೀಯವಾಗಿ ಒಂದಾಗಬಾರದು ಎಂಬ ಹುನ್ನಾರ ನಡೆಯುತ್ತಿದೆ.ಸಾಂಸ್ಕೃತಿಕವಾಗಿ ಒಂದಾಗಿರುವ ಸಮುದಾಯಗಳನ್ನು ದೂರ ಮಾಡುವ ಸಲುವಾಗಿಯೇ ಜಾತಿ, ಧರ್ಮಗಳ ನಡುವೆ ದ್ವೇಷಭಾವ ಬಿತ್ತಲಾಗುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ, ಮೈಸೂರು ವಿವಿ ಬಿಐಎಂಎಸ್ ಪ್ರಾಧ್ಯಾಪಕ ಡಾ.ಡಿ. ಆನಂದ್, ಪ್ರಗತಿಪರ ಚಿಂತಕ ಸಿ. ಹರಕುಮಾರ್, ಮುಳ್ಳೂರು ಕೃಷ್ಣ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ದ್ಯಾವಪ್ಪನಾಯಕ, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಉಪ್ಪಾರ್ ಇದ್ದರು.