ಕನಸಿನ ಭಾರತದ ಕಲ್ಪನೆಯನ್ನು ಸೋಲಿಸುತ್ತಿದ್ದೇವೆ

KannadaprabhaNewsNetwork |  
Published : Apr 15, 2025, 12:47 AM IST
5 | Kannada Prabha

ಸಾರಾಂಶ

ಸಂವಿಧಾನ ಆಶಯ ಜಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಇಡೀ ಭಾರತ ಕೇಳಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರುಬಾಬಾ ಸಾಹೇಬರನ್ನು ವೈಭವೀಕರಿಸಿ ಅವರ ಕನಸಿನ ಭಾರತದ ಕಲ್ಪನೆಯನ್ನು ಸೋಲಿಸುತ್ತಿದ್ದೇವೆ ಎಂದು ಸಾಹಿತಿ ಪ್ರೊ. ರಹಮತ್ ತರೀಕೆರೆ ವಿಷಾದಿಸಿದರು.ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂವಿಧಾನ ಆಶಯ ಜಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಇಡೀ ಭಾರತ ಕೇಳಿಕೊಳ್ಳಬೇಕಿದೆ. ಸಮಕಾಲೀನ ಸಮಾಜ ಇದನ್ನು ಪ್ರಶ್ನಿಸಿಕೊಳ್ಳಬೇಕು. ಈ ನೆಲದಲ್ಲಿ ಸಂವಿಧಾನ ಉಳಿಸಿ ಆಂದೋಲನ ಹುಟ್ಟುವುದೇ ವಿಚಿತ್ರವಾಗಿದೆ. ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಅವರು ಸಂವಿಧಾನ ಉಳಿಸುವ ಆಂದೋಲನ ನಡೆಸುತ್ತಿದ್ದಾರೆ. ಯಾಕೇ ಉಳಿಸಿಕೊಳ್ಳಬೇಕು? ಅಂತಹ ಪರಿಸ್ಥಿತಿ ಬಂದಿರುವುದೇ ವಿಚಿತ್ರ ಅಲ್ಲವೇ? ದೇಶದ ಆತ್ಮವಾಗಿ ಕೈಮರವಾಗಿ ಮಾರ್ಗ ತೋರಬೇಕಿದ್ದ ಸಂವಿಧಾನದ ಕೈ ಅನ್ನು ಮುರಿಯುತ್ತಿದ್ದೇವೆಯೇ ಎಂದರು.ಅಂಬೇಡ್ಕರ್‌ ಅವರ ಅಶೋತ್ತರಗಳು ನಿಜವಾಗಲೂ ಈಡೇರಿದ್ದರೆ ಅವರನ್ನು ಇಷ್ಟೊಂದು ನೆನಪಿಸಿಕೊಳ್ಳುವ ಅಗತ್ಯ ಇರಲಿಲ್ಲ. ಅಂಬೇಡ್ಕರ್ ಜಯಂತಿ ಯಾಂತ್ರಿಕ ಕಾರ್ಯಕ್ರಮವಾದರೆ ಅಪರಾಧವಾಗುತ್ತದೆ. ಅರಿವಿನ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ಶಿಕ್ಷಣ, ಚಿಂತನೆ, ಸಂಶೋಧನೆ ನಮ್ಮ ಅಸ್ತ್ರವೆಂದು ಬಾಬಾ ಸಾಹೇಬರು ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ವಿವಿಯ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಜ್ಞಾನ, ವಿವೇಕ, ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಕಾಳಜಿಯನ್ನು ವಿವಿ ಕಲಿಸಬೇಕು ಎಂದರು.ಜ್ಞಾನದ ವ್ಯಾಖ್ಯಾನ ಅರ್ಥ ಮಾಡಿಕೊಳ್ಳಬೇಕಾದರೆ ಬಾಬಾ ಸಾಹೇಬರನ್ನು ಓದಬೇಕು. ಭಾರತದ ದೊಡ್ಡ ಅಸ್ತ್ರ ಅಂಬೇಡ್ಕರ್. ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ. ಅಂಬೇಡ್ಕರ್‌ ಕುರಿತಾದ ಸಮಗ್ರ ಸಂಪುಟ ಬಂದು ಎಷ್ಟೋ ವರ್ಷವಾಗಿದೆ. ಆದರೂ ಭಾರತ ಜ್ಞಾನ ಸಂಪಾದಿಸುವ ದೇಶವಾಗಿ ಉಳಿದಿಲ್ಲ. ಬದಲಿಗೆ ಜ್ಞಾನ ವಿರೋಧಿಯಾಗಿ ಬದಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.ಅಂಬೇಡ್ಕರ್ ಅವರನ್ನು ಸಂವಿಧಾನ, ಮೀಸಲಾತಿಗೆ ಸೀಮಿತ ಮಾಡುವುದು ಮಹಾ ಆತ್ಮಾಘಾತಕವಾದದ್ದು. ಅವರ ಜ್ಞಾನ ಇಡೀ ಭಾರತಕ್ಕೆ ಬೇಕು. ಭಾರತಕ್ಕೆ ಎಷ್ಟೊಂದು ಕಾಣಿಕೆ ಇದೆ. ಎಲ್ಲರಿಗೂ ಅಂಬೇಡ್ಕರ್ ಬೇಕಾಗಿದ್ದಾರೆ. ದೇಶದಲ್ಲಿ ಸಹನಶೀಲತೆ ಇಲ್ಲ. ಅಂಬೇಡ್ಕರ್ ಬಯಸಿದ ಭಾತೃತ್ವ ಕಳೆದು ಹೋಗುತ್ತಿದೆ. ಧರ್ಮದ ಅಸಹನೆ ಬೆಳೆಯುತ್ತಿದೆ. ಚಿಂತಕರನ್ನು ಕೊಲೆ ಮಾಡಲಾಗುತ್ತಿದೆ. ಲೇಖಕರನ್ನು ಹೀಯಾಳಿಸುತ್ತಿದ್ದೇವೆ. ಬಾಬಾ ಸಾಹೇಬರ ಮೌಲ್ಯವನ್ನು ಘಾಸಿಗೊಳಿಸಿದ್ದೇವೆ ಎಂದು ಅವರು ನುಡಿದರು.ರಾಜಕೀಯ ಪಕ್ಷಗಳು ಭಾರತ ರತ್ನ ಕೊಟ್ಟಿದ್ದು ನಾವು, ಚುನಾವಣೆಯಲ್ಲಿ ಸೋಲಿಸಿದ್ದು ನೀವು ಇತ್ಯಾದಿ ಆರೋಪಗಳಲ್ಲಿ ನಿರತವಾಗಿವೆ. ಆದರೆ, ಈ ಪಕ್ಷಗಳು ಬಾಬಾ ಸಾಹೇಬರ ಕನಸು ಆಶಯ ಈಡೇರಿಸಲು ಮನಸ್ಸು ಮಾಡುತ್ತಿಲ್ಲ ಯಾಕೇ ಎಂದು ಅವರು ಪ್ರಶ್ನಿಸಿದರು.ಹೈಕೋರ್ಟ್‌ ನ ವಿಶ್ರಾಂತ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾವು ಇಂದು ಏನೇ ಆಗಿದ್ದರೂ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ. ಜೀವನ ಪ್ರತಿ ಕ್ಷಣ ಅವರನ್ನು ನೆನೆಯಬೇಕು ಎಂದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಸೋಮಶೇಖರ್, ಗಾಂಧಿ ಅಧ್ಯಯನ ವಿಭಾಗದ ಡಾ. ನರೇಂದ್ರ ಕುಮಾರ್, ಪ.ಜಾತಿ ಮತ್ತು ವರ್ಗಗಳ ವಿಭಾಗದ ಉಪ ಕುಲಸಚಿವ ಕೆ.ಎನ್‌.ಮಂಜುನಾಥ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ