ಹಾವೇರಿ: 12ನೇ ಶತಮಾನದ ಶರಣ ಧರ್ಮ ಎಲ್ಲ ವರ್ಗದ ಜನರನ್ನು ಒಂದು ಕಡೆ ಸೇರಿಸಿತ್ತು. ಆದರೆ ಪ್ರಸ್ತುತದಲ್ಲಿ ಆ ಧರ್ಮಕ್ಕೆ ಮತೀಯ ಲೇಪನ ಮಾಡಿ ಜನರ ಮನಸ್ಸನ್ನು ಛಿದ್ರಗೊಳಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಬೆಳಕು ನೀಡುವ ಜನರಿಗಿಂತ ಬೆಂಕಿ ಹಚ್ಚುವ ಜನರೇ ಹೆಚ್ಚಾಗಿರುವುದು ಕಳವಳಕಾರಿ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ಜಿಲ್ಲೆಯ ರಟ್ಟಿಹಳ್ಳಿಯ ಶ್ರೀಗುರು ಶರಣಬಸಪ್ಪ ಅಜ್ಜನವರ ನೂತನ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಧರ್ಮಸಭೆಯಲ್ಲಿ ಮಾತನಾಡಿದರು. ಈ ಜಗತ್ತು ದೇವರನ್ನು ಕಾಣಲಾಗದಿದ್ದರೂ ದೇವರಂತೆ ಬಂದು ವಿಶ್ವದ ಎಲ್ಲ ವರ್ಗದವರ ಆಗುಹೋಗುಗಳಿಗೆ ಸ್ಪಂದಿಸಿದ, ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದ ಮಾನವರಲ್ಲಿ ಮಾನವರಾಗಿದ್ದುಕೊಂಡು ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿದ ಮಾನವ ಮಹಾದೇವರುಗಳನ್ನು ಕಂಡಿದೆ. ಬುದ್ಧ, ಬಸವ, ಮಹಾವೀರ, ಅಂಬೇಡ್ಕರ ಮುಂತಾದವರೇ ಈ ಮನುಕುಲದ ಮಾರ್ಗದರ್ಶಕರು. ಇವರೇ ದಾರ್ಶನಿಕರು. ಇವರೇ ಕಣ್ಣಿಗೆ ಕಾಣುವ ದೇವರು. ಇವರು ಯಾವುದೇ ಲೋಕದಿಂದ ಇಳಿದು ಬಂದಿಲ್ಲ. ಮಾನವರಾಗಿ ಹುಟ್ಟಿ ಮಹಾಮಾನವೀಯ ಸ್ಥಿತಿಯನ್ನು ತಲುಪಿದವರು ಎಂದರು. ಧರ್ಮಸಭೆಯನ್ನು ಉದ್ಘಾಟಿಸಿದ ಸಿದ್ದಲಿಂಗಯ್ಯ ಕಬ್ಬಿಣಕಂತಿಮಠ ಮಾತನಾಡಿ, ವಿಶ್ವದಲ್ಲಿಯೇ ಭಾರತ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ. ಸಾಧು- ಸಂತರು, ದಾರ್ಶನಿಕರು, ಸಿದ್ಧಿ ಪುರುಷರ ಬದುಕು ಸಂದೇಶಗಳು ಮನುಕುಲಕ್ಕೆ ದಾರಿದೀಪವಾಗಿವೆ. ತಾಯಂದಿರು ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕು ಎಂದರು.ನೆಲಮಂಗಲ ಸಿದ್ಧಾರೂಢ ಮಠದ ಉಮಾಭಾರತಿ ಮಾತನಾಡಿ, ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುವುದು. ಎಲ್ಲ ಧರ್ಮಗಳಲ್ಲಿ ಮನುಷ್ಯ ಧರ್ಮವೇ ಶ್ರೇಷ್ಠ, ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ. ಎಲ್ಲವನ್ನು ಗೌರವಿಸೋಣ. ಇತರರಿಗೆ ಮಾಡುವ ಉಪಕಾರ ನಮ್ಮ ಸುಖದ ಸೋಪಾನ ಎಂದರು.ಶ್ರೀ ಗುರು ಕರಿಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಶಿವನಗೌಡ ಪೊಲೀಸಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಾವೇರಿಯ ಸಾಯಿ ಸೇವಾ ಸದ್ಭಕ್ತರು ನೂರಕ್ಕೂ ಅಧಿಕ ಮಾತೆಯರಿಗೆ ಉಡಿ ತುಂಬಿದರು.ಹನುಮಂತಪ್ಪ ಓಲೇಕಾರ, ಬಸವರಾಜ ಹಾದಿಮನಿ, ನಾಗಪ್ಪ ಓಲೇಕಾರ ಮತ್ತಿತರರು ಇದ್ದರು. ರೂಪ ಅಂಬ್ಲಿ, ಭಾವನ ಅರ್ಕಾಚಾರಿ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಬಿ.ಎಚ್. ದೊಡ್ಡಮನಿ ಸ್ವಾಗತಿಸಿದರು. ಶಿಕ್ಷಕ ಗದಿಗೆಪ್ಪ ಓಲೇಕಾರ ನಿರೂಪಿಸಿದರು. ರಾಮಣ್ಣ ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಗೌಡ ವಂದಿಸಿದರು.ಕೆಎಲ್‌ಇ ಪದವಿಪೂರ್ವ ಕಾಲೇಜು ಶೇ. 88 ಸಾಧನೆ
ಹಾನಗಲ್ಲ: ಇಲ್ಲಿನ ಕೆಎಲ್‌ಇ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ. 88.8 ರಷ್ಟಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇ. 91.3 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 84.61 ಫಲಿತಾಂಶ ಬಂದಿದೆ ಪ್ರಾಚಾರ್ಯ ಶಿವಕುಮರ ಯತ್ತಿನಹಳ್ಳಿ ತಿಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಲಿಂಗರಾಜ ಪಾಟೀಲ(ಶೇ. 92.83), ವಾಣಿಜ್ಯ ವಿಭಾಗದಲ್ಲಿ ಅಭಿನಯ ಸುಭಾಂಜಿ, ಮಂಜುಳಾ ಆರೇರ (ಶೇ. 93.83) ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. 108 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 20 ಉನ್ನತ ಶ್ರೇಣಿ, 62 ಪ್ರಥಮದರ್ಜೆ, 12 ದ್ವಿತೀಯ ದರ್ಜೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.