ಕನ್ನಡಪ್ರಭ ವಾರ್ತೆ ಮಂಡ್ಯ
ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಕೊಡುಗೆಗಳು, ಸಾಧನೆಗಳು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ 134 ನೇ ಅಂಬೇಡ್ಕರ್ ಜಯಂತಿಯಲ್ಲಿ ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಉನ್ನತ ವ್ಯಕ್ತಿಯಿಂದ ಇಡಿದು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಭಾರತೀಯ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ. ಯಾವುದೇ ವರ್ಗ ಮತ್ತು ಸಮಾಜಕ್ಕೆ ಸಿಮಿತವಾಗಿಲ್ಲ ಎಂದರು.ಇಡೀ ವಿಶ್ವವೇ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ರವರ ಸಾಧನೆ ಗುರುತಿಸಿ ಇಬ್ಬರೂ ವಿಶ್ವನಾಯಕರು ಎಂದು ಒಪ್ಪಿಕೊಂಡಿದೆ. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಸಂವಿಧಾನವೆಂದು ವಿಶ್ವವೇ ಹೇಳಿತು.
ಅಂಬೇಡ್ಕರ್ ಸರ್ವಕಾಲಕ್ಕೂ ಸರ್ವರೂ ಒಪ್ಪುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.ಉಪನ್ಯಾಸಕ ನೀಡಿದ ಪತ್ರಕರ್ತ ದೀಪಕ್, ಜಗತ್ತಿನಾದ್ಯಂತ 100ಕ್ಕೂ ಹೆಚ್ಚು ದೇಶಗಳು ಆಚರಿಸುವ ಜಯಂತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ತಮ್ಮ ಹೋರಾಟ ಮತ್ತು ಅವರು ಸಂಪಾದಿಸಿದ ಜ್ಞಾನಕ್ಕಾಗಿ ಜಗತ್ತು ಅವರನ್ನು ಗೌರವಿಸುತ್ತದೆ ಎಂದರು.
ಬಹುಜನರಿಗೆ ಹಸಿವು, ಶಿಕ್ಷಣ, ಸಾಮಾಜಿಕ ಭದ್ರತೆ ಸಿಗದಿರುವ ಕಾಲದಲ್ಲಿ ಎಲ್ಲರೂ ಸಮಾನರು ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ನಾವೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕುವೆಂಪು ರವರ ವಿಚಾರಗಳನ್ನು ತಿಳಿದು ಸಾಗಬೇಕು. ಕುವೆಂಪು ರವರ ವಿಶ್ವಮಾನವ ಸಂದೇಶ ಅರಿತು ಸಾಗಬೇಕು ಎಂದರು.ಇದೇ ವೇಳೆ ವಿದ್ಯಾರ್ಥಿ ನಿಲಯದ ಕುಂದುಕೊರತೆಗಳ ತಿಳಿಸಲು ಸಹಾಯವಾಣಿ ಸಂಖ್ಯೆಯನ್ನು ಸಚಿವರು ಬಿಡುಗಡೆಗೊಳಿಸಿದರು
ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿನಿಯರು ತಮ್ಮ ಕುಂದುಕೊರತೆ, ಯಾವುದೇ ಸಮಸ್ಯೆ ಉಂಟಾದರೆ ಮೊ-9480872008 ಅನ್ನು ಸಂಪರ್ಕಿಸಬಹುದು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಂಬೇಡ್ಕರ್ 134ನೇ ಜಯಂತಿ ಅಂಗವಾಗಿ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.