ಡಾ.ಬಿ.ಆರ್. ಅಂಬೇಡ್ಕರ್ ಬದುಕು ಸರ್ವರಿಗೂ ಸ್ಫೂರ್ತಿ: ಬಾಹುಸಾಹೇಬ ಕಾಂಬಳೆ

KannadaprabhaNewsNetwork | Published : Apr 16, 2024 1:02 AM

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ನೀಡಿದ ಮತದಾನದ ಹಕ್ಕು ಇಂದು ಮೌಲ್ಯ ಕಳೆದುಕೊಂಡಿದೆ ಎಂದು ಉಪನ್ಯಾಸಕ ಬಾಹುಸಾಹೇಬ ಕಾಂಬಳೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ಅವರು ಎಲ್ಲರಿಗೂ ನೀಡಿದ ಮತದಾನದ ಹಕ್ಕು ಇಂದಿನ ದಿನಗಳಲ್ಲಿ ಮೌಲ್ಯ ಕಳೆದುಕೊಂಡಿದೆ ಎಂದು ಉಪನ್ಯಾಸಕ ಬಾಹುಸಾಹೇಬ ಕಾಂಬಳೆ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಶ್ರೀಪಾದಭೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವರ ಆಶ್ರಯದಲ್ಲಿ ಜರುಗಿದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 133ನೇ ಜಯಂತಿತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರು ಬಾಬಾಸಾಹೇಬರ ಜಯಂತಿಯನ್ನು ಆಚರಿಸುವುದರ ಜೊತೆಗೆ ನಮ್ಮಗಾಗಿ ಏನು ಕೊಡುಗೆ ನೀಡಿದ್ದಾರೆ. ಆ ಕೊಡುಗೆ ಏನು ಹೇಗೆ ಅನ್ನುವುದನ್ನು ಅರಿತು, ನಮ್ಮ ಮಕ್ಕಳಿಗೆ ಅವರ ಆದರ್ಶ ತತ್ವಗಳನ್ನು ತಿಳಿಸಿ ಹೇಳಿ, ಬಾಬಾಸಾಹೇಬ ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವ ದಾರಿ ತೋರಿಸಬೇಕಿದೆ ಎಂದು ಕರೆ ನೀಡಿದರು.

ತಹಸೀಲ್ದಾರ್‌ ಬಿ.ಎಸ್. ಕಡಕಬಾಂವಿ, ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ದೀಪ, ಬಾಬಾಸಾಹೇಬರ ಚಿಂತನೆಗಳು ಇಂದಿಗೂ ಯುವಜನತೆಗೆ ಸ್ಫೂರ್ತಿ ನೀಡುತ್ತಲೇ ಇವೆ. ಬಾಬಾಸಾಹೇಬರ ಆಸೆಯಂತೆ ದಲಿತರು ದೇಶದಲ್ಲಿ ಉತ್ತಮ ನಾಯಕರಾಗಿ ಸಾಧನೆ ಮಾಡಬೇಕು. ದಲಿತರಿಗೆ ಮಾತ್ರ ಬಾಬಾಸಾಹೇಬರು ಸಂವಿಧಾನ ನೀಡಿಲ್ಲ. ಇಡೀ ಭಾರತೀಯರಿಗೆ ಕೊಡುಗೆ ನೀಡಿದ್ದಾರೆ. ನೀಡಿದಂತಹ ಸಂವಿಧಾನ ರಕ್ಷಿಸುವಂತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಳೆದ ಬಾರಿ ದಲಿತ ಸಮಾಜದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಿದರು. ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಪಂಪಲ ವಿತರಿಸಲಾಯಿತು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಪ್ರಾರಂಭವಾದ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪ ವೃತ್ತದ ಮಾರ್ಗವಾಗಿ ಶಾಲಾ ಆವರಣಕ್ಕೆ ಬಂದು ಅಂತ್ಯಗೊಂಡಿತು.

ಈ ಸಂದರ್ಭದಲ್ಲಿ ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಸಿಪಿಐ ಅಬ್ದುಲ್ ವಾಜೀದ್ ಪಟೇಲ್, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ, ಹೆಸ್ಕಾಂ ಅಧಿಕಾರಿ ಎಂ.ಎಸ್. ನಾಗನ್ನವರ, ಸಿಡಿಪಿಒ ಕಚೇರಿಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂದಿರಾ ಬೋವಿ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಕಚೇರಿಯ ಅಧಿಕ್ಷಕ ಎಂ.ಎಸ್. ಪಾಟೀಲ, ಪ್ರಾಚಾರ್ಯರ ಮಹೇಶ ಕಂಬಾರ, ವಸತಿ ನಿಲಯದ ನಿಲಯಪಾಲಕ ಯಲ್ಲಪ್ಪ ಭಂಜತ್ರಿ ಹಾಗೂ ದಲಿತ ಮುಖಂಡರು, ದಲಿತ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Share this article